ನವದೆಹಲಿ: ಶೈಕ್ಷಣಿಕ ವರ್ಷ 2025-26ರಲ್ಲಿ ವಿವಿಧ ಕಾರಣಗಳಿಂದಾಗಿ ದೇಶದಾದ್ಯಂತ ಒಟ್ಟು 58 ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಹಂತಹಂತವಾಗಿ ಮುಚ್ಚಲಾಗಿದೆ (Progressive Closure) ಎಂದು ತಾಂತ್ರಿಕ ಶಿಕ್ಷಣದ ರಾಷ್ಟ್ರೀಯ ನಿಯಂತ್ರಣ ಮಂಡಳಿಯಾದ 'ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್' (AICTE) ತಿಳಿಸಿದೆ.
ಆದರೆ, ಈ ಕಾಲೇಜುಗಳಲ್ಲಿ ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಯಾವುದೇ ಅಡ್ಡಿಯಿರುವುದಿಲ್ಲ ಎಂದು ಪರಿಷತ್ ಸ್ಪಷ್ಟಪಡಿಸಿದೆ.
ಏನಿದು ಹಂತ-ಹಂತದ ಮುಚ್ಚುವಿಕೆ (Progressive Closure)?
"ಹಂತ-ಹಂತದ ಮುಚ್ಚುವಿಕೆ ಅಂದರೆ, ಅನುಮತಿ ಪಡೆದ ಆಯಾ ಶೈಕ್ಷಣಿಕ ವರ್ಷದಿಂದ ಸದರಿ ಸಂಸ್ಥೆಯು ಮೊದಲ ವರ್ಷದ ಕೋರ್ಸ್‌ಗಳಿಗೆ ಹೊಸದಾಗಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ. ಆದರೆ, ಈಗಾಗಲೇ ಅಲ್ಲಿ ಓದುತ್ತಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಎಂದಿನಂತೆ ಮುಂದುವರಿಸಲಿದ್ದಾರೆ" ಎಂದು ಎಐಸಿಟಿಇ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ತಾಂತ್ರಿಕ ಕಾಲೇಜುಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಎಐಸಿಟಿಇ ಎರಡು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ. ಮೊದಲನೆಯದು ಹಂತಹಂತವಾಗಿ ಮುಚ್ಚುವುದಾದರೆ, ಎರಡನೆಯದು ಸಂಪೂರ್ಣವಾಗಿ ಮುಚ್ಚುವುದು (Complete Closure). ಸಂಪೂರ್ಣವಾಗಿ ಮುಚ್ಚುವ ಸಂದರ್ಭದಲ್ಲಿ ಕೋರ್ಸ್‌ಗಳನ್ನು ತಕ್ಷಣವೇ ನಿಲ್ಲಿಸಿ, ಅಲ್ಲಿನ ವಿದ್ಯಾರ್ಥಿಗಳನ್ನು ಬೇರೆ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ.
ಹೆಚ್ಚು ಕಾಲೇಜುಗಳು ಮುಚ್ಚಿದ ರಾಜ್ಯಗಳು
ಮುಚ್ಚಲ್ಪಟ್ಟಿರುವ 58 ಸಂಸ್ಥೆಗಳ ಪೈಕಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅತಿ ಹೆಚ್ಚು ಅಂದರೆ ತಲಾ 12 ಕಾಲೇಜುಗಳು ಬಂದ್ ಆಗಿವೆ. ಇವುಗಳ ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು, ಇಲ್ಲಿ 8 ಕಾಲೇಜುಗಳು ಮುಚ್ಚಲ್ಪಟ್ಟಿವೆ. ತೆಲಂಗಾಣ ಮತ್ತು ಪಂಜಾಬ್‌ನಲ್ಲಿ ತಲಾ 4 ಹಾಗೂ ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3 ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲಾಗಿದೆ. ಇನ್ನು ಕರ್ನಾಟಕ, ತಮಿಳುನಾಡು, ಗುಜರಾತ್, ಹರಿಯಾಣ, ಒಡಿಶಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 2 ಕಾಲೇಜುಗಳು ಹಾಗೂ ಪುದುಚೇರಿಯಲ್ಲಿ 1 ಕಾಲೇಜು ಮುಚ್ಚಲ್ಪಟ್ಟಿದೆ. ವಿಶೇಷವೆಂದರೆ, ಮುಚ್ಚಲಾದ 58 ಸಂಸ್ಥೆಗಳಲ್ಲಿ 3 ಸರ್ಕಾರಿ ಅನುದಾನಿತ ಕಾಲೇಜುಗಳಾಗಿದ್ದರೆ, ಉಳಿದವೆಲ್ಲವೂ ಖಾಸಗಿ ಅನುದಾನರಹಿತ ಸಂಸ್ಥೆಗಳಾಗಿವೆ. ಇದೇ ಅವಧಿಯಲ್ಲಿ ದೇಶಾದ್ಯಂತ ತಾಂತ್ರಿಕ ಕಾಲೇಜುಗಳಲ್ಲಿದ್ದ 950 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಕಾಲೇಜುಗಳನ್ನು ಮುಚ್ಚಲು ಕಾರಣಗಳೇನು?
ಎಐಸಿಟಿಇ ನಿಯಮಾವಳಿಗಳ ಪ್ರಕಾರ, ತಾಂತ್ರಿಕ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಅತ್ಯಂತ ಕ್ಷೀಣಿಸುವುದು, ಅಗತ್ಯವಿರುವಷ್ಟು ಬೋಧಕ ಸಿಬ್ಬಂದಿ (ಫ್ಯಾಕಲ್ಟಿ) ಇಲ್ಲದಿರುವುದು ಹಾಗೂ ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ನಿಯಮಗಳನ್ನು ಪಾಲಿಸದಿರುವುದು ಸೇರಿದಂತೆ ಹಲವು ಪ್ರಮುಖ ಕಾರಣಗಳ ಹಿನ್ನೆಲೆಯಲ್ಲಿ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಎಐಸಿಟಿಇ ತಿಳಿಸಿದೆ.

