Friday, 25 Sep, 2.32 pm Kannada News Now

ಕರ್ನಾಟಕ
ಹಾಡಿನಿಂದ ಅಮರರಾದ ಎಸ್.ಪಿ.ಬಿ : ಡಿಸಿಎಂ ಲಕ್ಷ್ಮಣ್ ಸವದಿ ಶೋಕ

ಬೆಂಗಳೂರು : ಗಾನಗಂಧರ್ವ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ಅಸ್ತಂಗತರಾಗುವುದರೊಂದಿಗೆ ಚಲನಚಿತ್ರ ಸಂಗೀತದ ಒಂದು ಯುಗವೇ ಅಂತ್ಯವಾಯಿತು ಎಂದು ಹೇಳಲು ನನಗೆ ತೀವ್ರ ದುಃಖವಾಗುತ್ತಿದೆ. ಶ್ರೀ ಎಸ್.ಪಿ.ಬಿ. ಈಗ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರ ಮಾಧುರ್ಯ ಸಿರಿಕಂಠದ ಗೀತ, ಸಂಗೀತಗಳಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರಿಗೆ ಸಂಗೀತವೇ ಸರ್ವಸ್ವವಾಗಿತ್ತು ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಶೋಕ ವ್ಯಕ್ತ ಪಡಿಸಿದ್ದಾರೆ.

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ

ನಿನ್ನ ನೀನು ಮರೆತರೇನು ಸುಖವಿದೆ ?… ತನ್ನತನವ ತೊರೆದರೇನು ಸೊಗಸಿದೆ?… ಎಂದು ಅತ್ಯಂತ ಸೊಗಸಾಗಿ ಬದುಕಿನ ಅರ್ಥ ಸ್ಫುರಿಸುವಂತೆ ಹಾಡಿದ ಎಸ್.ಪಿ.ಬಿ. ಅವರು ನಿಜಕ್ಕೂ ಅಮರರಾಗಿದ್ದಾರೆ. ಎಸ್.ಪಿ.ಬಿ. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದರೆ ಅವರ ಸೃಜನಶೀಲತೆಯ ಅಂತಃಸತ್ವ ಎಷ್ಟೊಂದು ಸಮರ್ಥವಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆದರೆ ಅವರ ಮೊದಲ ಪ್ರೀತಿ ಮತ್ತು ಒಲವು ಕನ್ನಡದ ಬಗ್ಗೆ ಇತ್ತು ಎಂಬುದು ಹೆಮ್ಮೆಯ ಸಂಗತಿ. ಅನೇಕ ಗೌರವ ಡಾಕ್ಟರೇಟ್ ಗಳಿಂದ ಹಿಡಿದು ಪದ್ಮ ಪ್ರಶಸ್ತಿವರೆಗೆ ಅನೇಕ ಪುರಸ್ಕಾರಗಳು ಅವರ ಪ್ರತಿಭೆಗೆ ಸಂದಿದ್ದವು ಎಂದಿದ್ದಾರೆ.

BIG BREAKING : ಖ್ಯಾತ ಗಾಯಕ 'ಎಸ್ ಪಿ ಬಾಲಸುಬ್ರಹ್ಮಣ್ಯಂ' ವಿಧಿವಶ

ಹೀಗೆ ಸರಸ್ವತಿಯ ಪುತ್ರರಾಗಿದ್ದ ಶ್ರೀ ಎಸ್.ಪಿ.ಬಿ. ಅವರ ಪ್ರತಿಭೆಗೆ ಅವರೇ ಸಾಟಿ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ. ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಾಂತ್ವನಗಳು.

ಇದು ಗಾನ ಗಂಧರ್ವ 'ಎಸ್.ಪಿ.ಬಾಲಸುಬ್ರಹ್ಮಣ್ಯಂ' ಜೀವನ 'ಗಾಯನ ಯಾತ್ರೆ'

ಕೊರೋನ ಮಹಾಮಾರಿಯಿಂದಾಗಿ ನಮ್ಮ ನಾಡು ಇತ್ತೀಚೆಗೆ ಹಲವು ಗಣ್ಯರನ್ನು ಕಳೆದುಕೊಂಡು ಆತಂಕದಲ್ಲಿದೆ. ಇವರ ಅಗಲಿಕೆಯನ್ನು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ದೇವರು ಕೊರೋನಾ ಪಿಡುಗಿಗೆ ಮುಕ್ತಿ ನೀಡಿ ನಾಡಿನ ಜನರಲ್ಲಿ ಸುಖಶಾಂತಿ ಸಮಾಧಾನ ನೆಲೆಸುವಂತೆ ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top