ಬೆಂಗಳೂರು: ಇಂದಿನ ಬದಲಾಗುತ್ತಿರುವ ಅಪರಾಧ ಮತ್ತು ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪೊಲೀಸ್ ಪಡೆ ನಿರಂತರವಾಗಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಹೊಸ ಅಪರಾಧಗಳಿಗೆ ಹಳೆಯ ವಿಧಾನಗಳಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಹೊಸ ಜ್ಞಾನ, ಆಧುನಿಕ ತಂತ್ರಜ್ಞಾನ ಹಾಗೂ ನಿರಂತರ ತರಬೇತಿಯ ಮೂಲಕ ಪೊಲೀಸ್ ಪಡೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (NSG)ಯ ಸಹಯೋಗದೊಂದಿಗೆ ಕರ್ನಾಟಕ ಪೊಲೀಸ್ ಪಡೆಗಾಗಿ ಆಯೋಜಿಸಿದ್ದ ಸಮಗ್ರ ಸಾಮರ್ಥ್ಯವೃದ್ಧಿ ತರಬೇತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಗೃಹ ಸಚಿವರು ಕರ್ನಾಟಕ ಪೊಲೀಸರಿಗೆ ಸಂದೇಶ ನೀಡಿ, ಎನ್.ಎಸ್.ಜಿಯಂತಹ ದೇಶದ ಅತ್ಯುನ್ನತ ಭದ್ರತಾ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಇಂತಹ ತರಬೇತಿ ಕಾರ್ಯಕ್ರಮವು ಕೇವಲ ಒಂದು ತರಬೇತಿ ಕಾರ್ಯಕ್ರಮವಲ್ಲ. ಇದು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸಮನ್ವಯ ಅಗತ್ಯ
ಭಯೋತ್ಪಾದನೆಯಂತಹ ದೊಡ್ಡ ಭದ್ರತಾ ಸವಾಲುಗಳನ್ನು ಯಾವುದೇ ಒಂದು ಸಂಸ್ಥೆಯಿಂದ ಮಾತ್ರ ಎದುರಿಸಲು ಸಾಧ್ಯವಿಲ್ಲ. ಗುಪ್ತಚರ ಸಂಸ್ಥೆಗಳು, ಪೊಲೀಸ್, ವಿಶೇಷ ಪಡೆಗಳು, ಫೊರೆನ್ಸಿಕ್ ಸಂಸ್ಥೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವೈದ್ಯಕೀಯ ಸೇವೆಗಳು ಹಾಗೂ ನಾಗರಿಕ ಆಡಳಿತ ಸೇರಿದಂತೆ ಎಲ್ಲ ಸಂಬಂಧಿತ ಸಂಸ್ಥೆಗಳು ಒಂದೇ ಗುರಿಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆಗೆ ಒತ್ತು
ಕರ್ನಾಟಕ ಪೊಲೀಸ್ ಇಲಾಖೆಯನ್ನು ಆಧುನಿಕಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರಂತರವಾಗಿ ಹೆಚ್ಚಿನ ಒತ್ತು ನೀಡುತ್ತಿದೆ. ಫೊರೆನ್ಸಿಕ್ ಸಾಮರ್ಥ್ಯ, ಸೈಬರ್ ತನಿಖೆ, ದತ್ತಾಂಶ ಆಧಾರಿತ ಪೊಲೀಸ್ ವ್ಯವಸ್ಥೆ, ತ್ವರಿತ ಪ್ರತಿಕ್ರಿಯೆ ಹಾಗೂ ವಿಶೇಷ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಅದನ್ನು ಪರಿಣಾಮಕಾರಿಯಾಗಿ ಬಳಸುವ ಕೌಶಲ್ಯವನ್ನು ಪೊಲೀಸ್ ಸಿಬ್ಬಂದಿ ಹೊಂದಿರುವುದು ಮುಖ್ಯ, ಪೊಲೀಸ್ ಪಡೆ ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಮೂಲಕ ಹೊಸ ರೀತಿಯ ಅಪರಾಧಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವಂತಾಗಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವೃತ್ತಿಪರತೆ ಮತ್ತು ಪ್ರಾಮಾಣಿಕತೆಯೇ ಪೊಲೀಸ್ ಪಡೆಯ ಶಕ್ತಿ
ಪೊಲೀಸ್ ಪಡೆಯ ಪ್ರತಿಯೊಬ್ಬ ಸಿಬ್ಬಂದಿಯೂ ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ನಿರ್ವಹಿಸಿದಾಗ ಮಾತ್ರ ಸುರಕ್ಷಿತ ಹಾಗೂ ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ಸಾಧ್ಯ. ಪೊಲೀಸ್ ಸಿಬ್ಬಂದಿಯ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುವ ಇಂತಹ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು, ಎನ್‌ಎಸ್‌ಜಿ ಸಹಯೋಗದಲ್ಲಿ ನಡೆದ ಈ ಸಮಗ್ರ ಸಾಮರ್ಥ್ಯವೃದ್ಧಿ ತರಬೇತಿ ಕಾರ್ಯಕ್ರಮವು ಕರ್ನಾಟಕ ಪೊಲೀಸ್ ಪಡೆಯ ವೃತ್ತಿಪರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದರೊಂದಿಗೆ, ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ಅಗತ್ಯವಾದ ಆತ್ಮವಿಶ್ವಾಸ ಮತ್ತು ಸನ್ನದ್ಧತೆಯನ್ನು ಹೆಚ್ಚಿಸಿದೆ ಎಂದು ಎಂದು ಗೃಹ ಸಚಿವರು ತಮ್ಮ ಸಂದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

