ನವದೆಹಲಿ: ದೇಶದ ಕೋಟ್ಯಂತರ ನೌಕರರು ಹಾಗೂ ಪಿಂಚಣಿದಾರರಿಗೆ ಭವಿಷ್ಯ ನಿಧಿ (ಪಿಎಫ್) ಸೇವೆಗಳಿಗೆ ಸಂಬಂಧಿಸಿದ ಅಗತ್ಯ ಅಪ್‌ಡೇಟ್‌ಗಳನ್ನು ಸಕಾಲದಲ್ಲಿ ತಲುಪಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೊಸ ಡಿಜಿಟಲ್ ಹೆಜ್ಜೆಯಿಟ್ಟಿದೆ. ತನ್ನ ಸೇವಾ ಜಾಲವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಇಪಿಎಫ್‌ಒ ಇದೀಗ ಅಧಿಕೃತ ವಾಟ್ಸಾಪ್ ಚಾನೆಲ್ ಆರಂಭಿಸಿದೆ.
'ಎಕ್ಸ್' ಪೋಸ್ಟ್ ಮೂಲಕ ಸದಸ್ಯರಿಗೆ ಅಧಿಕೃತ ಆಹ್ವಾನ
ತನ್ನ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿರುವ ಇಪಿಎಫ್‌ಒ, "ಇಪಿಎಫ್‌ಒ ಈಗ ವಾಟ್ಸಾಪ್‌ನಲ್ಲೂ ಲಭ್ಯ!" ಎಂದು ತಿಳಿಸಿದೆ.
ಸಂಸ್ಥೆ ಹಂಚಿಕೊಂಡಿರುವ ನೇರ ಲಿಂಕ್ ಅಥವಾ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸದಸ್ಯರು ಮತ್ತು ಪಿಂಚಣಿದಾರರು ಈ ಚಾನೆಲ್ ಅನ್ನು ಫಾಲೋ ಮಾಡಿ ಇಲಾಖೆಯ ಅಧಿಕೃತ ಮಾಹಿತಿಯನ್ನು ನೇರವಾಗಿ ಪಡೆಯಬಹುದಾಗಿದೆ.
ವಾಟ್ಸಾಪ್ ಚಾನೆಲ್‌ನಲ್ಲಿ ಲಭ್ಯವಾಗುವ ಪ್ರಮುಖ ಸೌಲಭ್ಯಗಳು
ಈ ವಾಟ್ಸಾಪ್ ಚಾನೆಲ್ ಮೂಲಕ ಚಂದಾದಾರರಿಗೆ ಇಪಿಎಫ್‌ಒ ಜಾರಿಗೆ ತರುವ ಹೊಸ ನಿಯಮಗಳು, ಸೌಲಭ್ಯಗಳು, ತಿದ್ದುಪಡಿಗಳು ಹಾಗೂ ಕಾಲಮಿತಿಯ ಪ್ರಕಟಣೆಗಳು ಕ್ಷಣಾರ್ಧದಲ್ಲಿ ತಲುಪಲಿವೆ. ಇದರ ಜೊತೆಗೆ ನಿವೃತ್ತ ಪಿಂಚಣಿದಾರರಿಗೆ ಉಪಯುಕ್ತವಾಗುವ ಮಾಹಿತಿಗಳು ಮತ್ತು ಸಂಸ್ಥೆಯ ಸೇವೆಗಳ ಕುರಿತ ಸಾರ್ವಜನಿಕ ಜಾಗೃತಿ ಸಂದೇಶಗಳು ಇಲ್ಲಿ ನಿರಂತರವಾಗಿ ಲಭ್ಯವಾಗಲಿವೆ.
ಚಾನೆಲ್ ಸೇರ್ಪಡೆ ಹೇಗೆ?
ಇಪಿಎಫ್‌ಒ ತನ್ನ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯ ಮೂಲಕ ವಾಟ್ಸಾಪ್ ಚಾನೆಲ್‌ನ ನೇರ ಲಿಂಕ್ ಹಂಚಿಕೊಂಡಿದೆ. ಸದಸ್ಯರು ಆ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಥವಾ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಚಾನೆಲ್ ಫಾಲೋ ಮಾಡಬಹುದು. ಪ್ರತಿಯೊಬ್ಬ ಸದಸ್ಯರೂ ಅಧಿಕೃತ ಅಕೌಂಟ್ ಹೌದೇ ಎಂಬುದನ್ನು ಖಚಿತಪಡಿಸಿಕೊಂಡು ಸೇರ್ಪಡೆಯಾಗಬೇಕು. ಪಿಎಫ್ ಸೇವೆ ನೀಡುವ ನೆಪದಲ್ಲಿ ಬರುವ ಯಾವುದೇ ಅನಧಿಕೃತ ಲಿಂಕ್‌ಗಳು ಅಥವಾ ಸಂದೇಶಗಳಿಗೆ ಸ್ಪಂದಿಸದಂತೆ ಎಚ್ಚರಿಕೆ ವಹಿಸಬೇಕಿದೆ.
ಇದಲ್ಲದೇ ನೀವು https://www.whatsapp.com/channel/0029Vb6kmH48Pgs8ftd6Kw3Y ಲಿಂಕ್ ಕ್ಲಿಕ್ ಮಾಡುವ ಮೂಲಕ ನೇರವಾಗಿ ಇಪಿಎಫ್‌ಓ ವಾಟ್ಸ್ ಆಪ್ ಚಾಲನ್ ನೇರವಾಗಿ ಸೇರಬಹುದಾಗಿದೆ.
ಯುಪಿಐ ವಿತ್‌ಡ್ರಾವಲ್ ಸೌಲಭ್ಯ ಪ್ರತ್ಯೇಕ
ಇದೇ ವೇಳೆ, ಯುಪಿಐ (UPI) ಪಾವತಿ ಗೇಟ್‌ವೇ ಮೂಲಕ ಪಿಎಫ್ ಖಾತೆಯಿಂದ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವ ವ್ಯವಸ್ಥೆಯ ಪರೀಕ್ಷಾರ್ಥ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಈ ಹಿಂದೆ ಸ್ಪಷ್ಟಪಡಿಸಿದ್ದರು. ಆದರೆ, ಈ ಯುಪಿಐ ಹಣ ಹಿಂಪಡೆಯುವ ಯೋಜನೆ ಸಂಪೂರ್ಣ ಪ್ರತ್ಯೇಕವಾಗಿದ್ದು, ಪ್ರಸ್ತುತ ಆರಂಭವಾಗಿರುವ ವಾಟ್ಸಾಪ್ ಮಾಹಿತಿ ಚಾನೆಲ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಪಿಎಫ್ ಕುರಿತ ನಿಖರ ಹಾಗೂ ಅಧಿಕೃತ ಮಾಹಿತಿಯನ್ನು ಪಡೆಯಲು ಮಾತ್ರ ಈ ವಾಟ್ಸಾಪ್ ಚಾನೆಲ್ ಸೀಮಿತವಾಗಿದೆ
ವೈಯಕ್ತಿಕ ಬ್ಯಾಲೆನ್ಸ್ ಅಥವಾ ಹಣ ಹಿಂಪಡೆಯಲು ಅವಕಾಶವಿಲ್ಲ
ಸದರಿ ವಾಟ್ಸಾಪ್ ಚಾನೆಲ್ ಕೇವಲ ಮಾಹಿತಿ ಪ್ರಸಾರದ ಅಧಿಕೃತ ಮಾಧ್ಯಮವಾಗಿದ್ದು, ಸದಸ್ಯರ ಹಾಲಿ ಆನ್‌ಲೈನ್ ಸೇವೆಗಳಿಗೆ ಇದು ಪರ್ಯಾಯವಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಚಾನೆಲ್‌ನಲ್ಲಿ ಸದಸ್ಯರು ತಮ್ಮ ವೈಯಕ್ತಿಕ ಪಿಎಫ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು, ಕ್ಲೈಮ್ ಸ್ಟೇಟಸ್ ತಿಳಿಯುವುದು ಅಥವಾ ಹಣ ಹಿಂಪಡೆಯುವಿಕೆ (Withdrawal) ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಿಲ್ಲ. ವೈಯಕ್ತಿಕ ಸೇವೆಗಳಿಗೆ ಎಂದಿನಂತೆ ಇಪಿಎಫ್‌ಒ ಅಧಿಕೃತ ಪೋರ್ಟಲ್ ಹಾಗೂ ಉಮಾಂಗ್ ಆಯಪ್ ಅನ್ನೇ ಬಳಸಬೇಕಾಗುತ್ತದೆ.
ವಂಚಕರ ಬಗ್ಗೆ ಇರಲಿ ಕಟ್ಟೆಚ್ಚರ
ಇಪಿಎಫ್‌ಒ ಹಂಚಿಕೊಂಡಿರುವ ಅಧಿಕೃತ ಲಿಂಕ್ ಅಥವಾ ಕ್ಯೂಆರ್ ಕೋಡ್ ಮೂಲಕ ಮಾತ್ರ ಚಾನೆಲ್ ಸೇರ್ಪಡೆಗೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪಿಎಫ್ ಸೇವೆ ನೀಡುವುದಾಗಿ ನಂಬಿಸಿ ಬರುವ ಅನಧಿಕೃತ ಸಂದೇಶಗಳು ಮತ್ತು ಅಪರಿಚಿತ ಲಿಂಕ್‌ಗಳಿಂದ ದೂರವಿರಲು ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ, ಶೀಘ್ರದಲ್ಲೇ ಬರಲಿರುವ ಯುಪಿಐ ಆಧಾರಿತ ಹಣ ಹಿಂಪಡೆಯುವ ಯೋಜನೆ ಸಂಪೂರ್ಣ ಪ್ರತ್ಯೇಕವಾಗಿದ್ದು, ಅದಕ್ಕೂ ಈ ಮಾಹಿತಿ ಚಾನೆಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸ್ಥೆ ತಿಳಿಸಿದೆ.

