ನವದೆಹಲಿ : ಪ್ರತಿಷ್ಠಿತ 'ಫೋರ್ಬ್ಸ್ ಇಂಡಿಯಾ' ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ ಮೂಲಕ ಕನ್ನಡ ಚಿತ್ರರಂಗದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ನಟನೆ, ನಿರ್ದೇಶನ ಹಾಗೂ ಬರಹ-ಈ ಮೂರೂ ಪ್ರಮುಖ ವಿಭಾಗಗಳಲ್ಲಿ ಏಕಕಾಲಕ್ಕೆ ಆಯ್ಕೆಯಾಗಿರುವ ಭಾರತದ ಏಕೈಕ ಸೆಲೆಬ್ರಿಟಿ ಎಂಬ ಅಪರೂಪದ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಸ್ಥಳೀಯ ಜಾನಪದ ಸೊಗಡಿನ ಕಥೆಗಳನ್ನು ಜಾಗತಿಕ ಗುಣಮಟ್ಟದಲ್ಲಿ ತೆರೆಗೆ ತರುವ ಮೂಲಕ ಕನ್ನಡಿಗರೊಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿರುವುದು ಇತಿಹಾಸ ಸೃಷ್ಟಿಸಿದೆ.
ಹೊಂಬಾಳೆ ಫಿಲ್ಮ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಸಿನಿಮಾ ಜಾಗತಿಕ ಮಟ್ಟದಲ್ಲಿ ಭರ್ಜರಿ ಪ್ರದರ್ಶನಗೊಂಡು ರೂ. 800 ಕೋಟಿಗೂ ಅಧಿಕ ಗಳಿಕೆ ದಾಖಲಿಸಿತ್ತು. ದೈವಾರಾಧನೆ, ಸ್ಥಳೀಯ ಸಂಸ್ಕೃತಿ ಮತ್ತು ಪ್ರಕೃತಿ-ಮಾನವನ ಸಂಘರ್ಷದ ಕಥಾಹಂದರ ಹೊಂದಿದ್ದ ಈ ಚಿತ್ರವು ವಿಶ್ವಾದ್ಯಂತ ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಅಭೂತಪೂರ್ವ ಯಶಸ್ಸು ಮತ್ತು ಪ್ಯಾನ್-ಇಂಡಿಯಾ ಮಟ್ಟದ ಜನಪ್ರಿಯತೆಯೇ ರಿಷಬ್ ಶೆಟ್ಟಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ದೊರೆಯಲು ಮುಖ್ಯ ಕಾರಣವಾಗಿದೆ.

