Dailyhunt Logo
  • Light mode
    Follow system
    Dark mode
    • Play Story
    • App Story
ಮಾಂಸ ಪ್ರಿಯರೇ ಗಮನಿಸಿ : ಬೆಂಗಳೂರಲ್ಲಿ ನಾಳೆ, ನಾಡಿದ್ದು ಚಿಕನ್ ಸಿಗಲ್ಲ.!

ಮಾಂಸ ಪ್ರಿಯರೇ ಗಮನಿಸಿ : ಬೆಂಗಳೂರಲ್ಲಿ ನಾಳೆ, ನಾಡಿದ್ದು ಚಿಕನ್ ಸಿಗಲ್ಲ.!

Kannada News Now 2 weeks ago

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೋಳಿ ಮಾಂಸ ವ್ಯಾಪಾರಿಗಳಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಹೊಸ ಆರ್ಥಿಕ ಹೊರೆ ಹೇರಿದೆ. ಪ್ರತಿ ಕೆಜಿ ಕೋಳಿ ತ್ಯಾಜ್ಯ ವಿಲೇವಾರಿಗೆ ₹5 ಶುಲ್ಕ ಪಾವತಿಸಬೇಕೆಂದು ಹೊರಡಿಸಿರುವ ವಿವಾದಾತ್ಮಕ ಆದೇಶವನ್ನು ಖಂಡಿಸಿ, ನಗರದ ಚಿಕನ್ ವ್ಯಾಪಾರಿಗಳು ಇದೇ ಸೆಪ್ಟೆಂಬರ್ 3 ಮತ್ತು 4ರಂದು (ಗುರುವಾರ ಮತ್ತು ಶುಕ್ರವಾರ) ಎರಡು ದಿನಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವೇನು?

ಕಳೆದ 15 ದಿನಗಳ ಹಿಂದೆ ಬಿಎಸ್‌ಡಬ್ಲ್ಯುಎಂಎಲ್ ಈ ಹೊಸ ನಿಯಮವನ್ನು ಜಾರಿಗೆ ತಂದು ನೋಟಿಸ್ ಜಾರಿ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ನಡೆಸುವುದಾಗಿ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ಹಾಗೂ ವ್ಯಾಪಾರಿಗಳು ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ:

  • ಖಾಸಗಿ ಲಾಭದ ದಂಧೆ: ಈ ಹಿಂದೆ ಖಾಸಗಿ ಏಜೆನ್ಸಿಗಳು ಹಣ ನೀಡಿ ಕೋಳಿ ತ್ಯಾಜ್ಯವನ್ನು ಖರೀದಿಸಿ ಪ್ರಾಣಿಗಳ ಆಹಾರ ತಯಾರಿಕಾ ಕೈಗಾರಿಕೆಗಳಿಗೆ ಪೂರೈಸುತ್ತಿದ್ದವು. ಈಗಲೂ ಅದೇ ವ್ಯವಸ್ಥೆ ಮುಂದುವರಿದಿರುವಾಗ, ವ್ಯಾಪಾರಿಗಳಿಂದಲೇ ಕಿಲೋಗೆ ₹5 ವಸೂಲಿ ಮಾಡುವ ಸರ್ಕಾರದ ಉದ್ದೇಶವೇನು? ಇದರ ಹಿಂದೆ ದೊಡ್ಡ ಮಧ್ಯವರ್ತಿಗಳ ಮಾಫಿಯಾ ಕೆಲಸ ಮಾಡುತ್ತಿದೆ.

  • ಮಾಸಿಕ ₹5 ರಿಂದ ₹7 ಸಾವಿರ ಹೊರೆ: ಹಳ್ಳಿಗಳಿಂದ ನಗರಕ್ಕೆ ಬಂದು ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ವ್ಯಾಪಾರಿಗಳಿಗೆ ಈ ಹೊಸ ಶುಲ್ಕದಿಂದಾಗಿ ತಿಂಗಳಿಗೆ ಸರಾಸರಿ ₹5,000 ದಿಂದ ₹7,000 ವರೆಗೆ ಹೆಚ್ಚುವರಿ ಹೊರೆಯಾಗಲಿದ್ದು, ಇದು ವ್ಯಾಪಾರಕ್ಕೆ ದೊಡ್ಡ ಪೆಟ್ಟು ನೀಡಲಿದೆ.

  • ಕಾನೂನು ಹೋರಾಟದ ಎಚ್ಚರಿಕೆ: ಸರ್ಕಾರ ತಕ್ಷಣವೇ ಈ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯಬೇಕು. ಒಂದು ವೇಳೆ ಸರ್ಕಾರ ಮಣಿಯದಿದ್ದರೆ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಸಮರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಂಸ ಪ್ರಿಯರಿಗೆ 2 ದಿನ ಚಿಕನ್ ಸಿಗೋದು ಡೌಟ್

ಗುರುವಾರ ಮತ್ತು ಶುಕ್ರವಾರ ನಗರದಾದ್ಯಂತ ಚಿಕನ್ ಅಂಗಡಿಗಳು ಬಾಗಿಲು ಮುಚ್ಚಲಿರುವುದರಿಂದ ಮಾಂಸ ಪ್ರಿಯರಿಗೆ ಹಾಗೂ ಹೋಟೆಲ್ ಉದ್ಯಮಕ್ಕೆ ಭಾರಿ ತೊಂದರೆಯಾಗುವ ಸಾಧ್ಯತೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now