ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದಲ್ಲಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸಮೀಪದ ಕೈಬಿಡಲಾದ ಶಿಪ್ಪಿಂಗ್ ಕಂಟೇನರ್‌ನಲ್ಲಿ 38 ವರ್ಷದ ವ್ಯಕ್ತಿಯೊಬ್ಬನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ 64 ವರ್ಷದ ತಂದೆ ಹಾಗೂ ಆತನ 49 ವರ್ಷದ ಸಹಚರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾ ರೆ.
ಆಗಸ್ಟ್ 23 ರಂದು ಬೆಳಿಗ್ಗೆ ಎನ್‌ಟಿಪಿಸಿ ಗಡಿ ಗೋಡೆಯ ಬಳಿ ಇರುವ ಕಂಟೇನರ್‌ನಲ್ಲಿ ಗಂಭೀರ ತಲೆ ಗಾಯದೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.ತನಿಖೆಯ ವೇಳೆ ಮೃತನನ್ನು ಗುಲ್ ಹಸನ್ ಎಂದು ಗುರುತಿಸಲಾಗಿದ್ದು, ಆತ ದೀರ್ಘಕಾಲದಿಂದ ಶ್ರವಣದೋಷ ಹಾಗೂ ಸಿಜೋಫ್ರೇನಿಯಾದಂತಹ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.ವೈದ್ಯರ ಬಳಿ ಚಿಕಿತ್ಸೆಗೆ ಕರೆದೊಯ್ಯುವುದಾಗಿ ಸುಳ್ಳು ಹೇಳಿ ಆತನನ್ನು ನಿರ್ಜನ ಪ್ರದೇಶದ ಕಂಟೇನರ್‌ಗೆ ಕರೆದೊಯ್ದಿದ್ದ ತಂದೆ ತಾಲೂಕ್ದಾರ್ ಅನ್ಸಾರಿ ಹಾಗೂ ಆತನ ಸಹಚರ ಮೊಹಮ್ಮದ್ ವಸೀಮ್, ಕಲ್ಲಿನಿಂದ ತಲೆಗೆ ಹೊಡೆದು ನಂತರ ಬಟ್ಟೆಯ ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದ ಸಿಟಿವಿ ಫೂಟೇಜ್ ವಿಶ್ಲೇಷಿಸಿದ ಪೊಲೀಸರು, ಮೃತನೊಂದಿಗೆ ಸಾಗಿದ್ದ ಇಬ್ಬರು ಆರೋಪಿಗಳನ್ನು ಗೋವಿಂದಪುರಿಯ ಹೊಲಿಗೆ ಕಾರ್ಖಾನೆಯೊಂದರಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹತ್ಯೆಗೆ ಬಳಸಿದ ಕಲ್ಲು, ರಕ್ತಸಿಕ್ತ ಬಟ್ಟೆಗಳು ಹಾಗೂ ಹಗ್ಗವನ್ನು ವಶಪಡಿಸಿಕೊಂಡಿದ್ದು, ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

