ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ದುರುಪಯೋಗದ ವಿಡಿಯೋಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸುತ್ತಿವೆ. ಕಳೆದ ವಾರವಷ್ಟೇ ರಸ್ತೆಯಲ್ಲಿ ಚಲಿಸುತ್ತಿದ್ದ ಇ-ರಿಕ್ಷಾಗಳನ್ನು ಮೊಬೈಲ್ ಆಪ್ ಮೂಲಕ ಆಫ್ ಮಾಡುವ ವಿಡಿಯೋಗಳು ವೈರಲ್ ಆಗಿದ್ದ ಬೆನ್ನಲ್ಲೇ, ಈಗ ಮತ್ತೊಂದು ವಿಲಕ್ಷಣ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಈ ಹೊಸ ವಿಡಿಯೋದಲ್ಲಿ ಕೆಲವರು ಮೊಬೈಲ್ ಆಪ್ ಒಂದನ್ನು ಬಳಸಿ ಎಟಿಎಂ (ATM) ಮಷಿನ್ ಅನ್ನು ಆನ್ ಮತ್ತು ಆಫ್ ಮಾಡುತ್ತಿರುವುದಾಗಿ ಹಕ್ಕು ಮಂಡಿಸಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆ ಅಥವಾ ಅಸಲಿ ತನ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಬ್ಯಾಂಕಿಂಗ್ ಸುರಕ್ಷತೆಯ ದೃಷ್ಟಿಯಿಂದ ಇದು ಜನರಲ್ಲಿ ಮತ್ತು ಅಧಿಕಾರಿಗಳಲ್ಲಿ ಭಾರಿ ಕಳವಳವನ್ನು ಉಂಟುಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಎಟಿಎಂ ನಿಯಂತ್ರಿಸಲು ಬಳಸಿರುವ ಆಪ್‌ನ ಇಂಟರ್‌ಫೇಸ್, ಇ-ರಿಕ್ಷಾಗಳನ್ನು ಬಂದ್ ಮಾಡಲು ಬಳಸಲಾಗಿದ್ದ 'ಬ್ಯಾಟ್-ಬಿಎಂಎಸ್' (BAT-BMS) ಆಪ್‌ನಂತೆಯೇ ಕಾಣಿಸುತ್ತಿದೆ. ವಿಡಿಯೋದಲ್ಲಿ ಆಪ್ ಬಳಸುತ್ತಿರುವ ವ್ಯಕ್ತಿಗಳ ಮುಖಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ.
ಆದರೆ, ಮೊಬೈಲ್ ಆಪ್ ಮೂಲಕ ನಿಜವಾಗಿಯೂ ಎಟಿಎಂ ಮಷಿನ್ ಅನ್ನು ಆಫ್ ಮಾಡಲು ಸಾಧ್ಯವೇ ಎಂಬ ಬಗ್ಗೆ ಬ್ಯಾಂಕುಗಳು ಅಥವಾ ತಾಂತ್ರಿಕ ಸಂಸ್ಥೆಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಎಟಿಎಂ ಮಷಿನ್‌ಗಳು ಸಾಧಾರಣವಾಗಿ ಆಟೋಮ್ಯಾಟಿಕ್ ಆಗಿ ರಿಸ್ಟಾರ್ಟ್ ಅಥವಾ ರೀಬೂಟ್ ಆಗುವ ಸಮಯದಲ್ಲಿ, ಯಾರೋ ಕಿಡಿಗೇಡಿಗಳು ಮೊಬೈಲ್ ಆಪ್ ಪ್ರದರ್ಶಿಸುತ್ತಾ ಈ ವಿಡಿಯೋ ರೆಕಾರ್ಡ್ ಮಾಡಿರುವ ಸಾಧ್ಯತೆಯೂ ಇದೆ ಎಂದು ತಜ್ಞರು ಶಂಕಿಸಿದ್ದಾರೆ.
ಕೆಲ ದಿನಗಳ ಹಿಂದೆ ಇ-ರಿಕ್ಷಾಗಳ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಾದ ಲಿಥಿಯಂ ಬ್ಯಾಟರಿಗಳ 'ಬ್ಯಾಟ್-ಬಿಎಂಎಸ್' ಎಂಬ ಚೀನೀ ಆಪ್ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಆಪ್‌ನ ಬ್ಲೂಟೂತ್ ಕನೆಕ್ಟಿವಿಟಿ ಭದ್ರತೆಯಲ್ಲಿ ಲೋಪವಿದ್ದ ಕಾರಣ, 10 ರಿಂದ 15 ಮೀಟರ್ ವ್ಯಾಪ್ತಿಯಲ್ಲಿ ಫೋನ್ ಸಂಪರ್ಕಿಸಿ ಚಲಿಸುವ ಇ-ರಿಕ್ಷಾಗಳನ್ನು ಆಫ್ ಮಾಡಲಾಗುತ್ತಿತ್ತು. ಪ್ರಯಾಣಿಕರ ಸುರಕ್ಷತೆ ಮತ್ತು ಬ್ಯಾಟರಿ ಭದ್ರತೆಯನ್ನು ಪರಿಗಣಿಸಿ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಇಂತಹ ಆಪ್‌ಗಳನ್ನು ತೆಗೆದುಹಾಕಲು ಆದೇಶಿಸಿತ್ತು. ಈಗ ಅದೇ ಮಾದರಿಯ ಆಪ್ ಬಳಸಿ ಎಟಿಎಂಗಳನ್ನು ಗುರಿಯಾಗಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿದ್ದು, ಸೈಬರ್ ಭದ್ರತಾ ವಿಭಾಗವು ಈ ವೈರಲ್ ವಿಡಿಯೋದ ಮೂಲವನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದೆ.

