ನವದೆಹಲಿ: ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಸರ್ಕಾರ ಪತನಗೊಂಡ ನಂತರ ದೇಶದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಬಾಂಗ್ಲಾದೇಶವೀಗ 'ವಿಫಲ ರಾಷ್ಟ್ರ'ವಾಗಿ (Failed State) ಪರಿವರ್ತನೆಯಾಗಿದೆ. ಇದು ಭಾರತದ ಭದ್ರತೆಗೆ ದೀರ್ಘಕಾಲದ ದೊಡ್ಡ ಬೆದರಿಕೆಯಾಗಲಿದೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೆದ್ ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ 'ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ' (FCC) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಜೀಬ್ ಅವರ ಪ್ರಾಸ್ತಾವಿಕ ನುಡಿಗಳ ನಂತರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ವೀಡಿಯೋ ಲಿಂಕ್ ಮೂಲಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಭಾರತದ ಪೂರ್ವ ಗಡಿಯಲ್ಲಿ ಮತ್ತೊಂದು ಪಾಕಿಸ್ತಾನ:
ಭಾರತಕ್ಕೆ ಉಂಟಾಗಬಹುದಾದ ಭದ್ರತಾ ಬೆದರಿಕೆಯ ಕುರಿತು ಎಚ್ಚರಿಸಿದ ಸಜೀಬ್, "ಭಾರತವನ್ನು ಅತ್ಯಂತ ಹೆಚ್ಚಾಗಿ ಕಳವಳಕ್ಕೀಡು ಮಾಡಬೇಕಾದ ವಿಷಯವೆಂದರೆ, ಭಾರತದ ಪೂರ್ವ ಗಡಿಯಲ್ಲಿ ಬಾಂಗ್ಲಾದೇಶವೀಗ 'ಮತ್ತೊಂದು ಪಾಕಿಸ್ತಾನ'ದಂತೆ ಬದಲಾಗುತ್ತಿದೆ. ಅವಾಮಿ ಲೀಗ್ ಆಡಳಿತಾವಧಿಯಲ್ಲಿ ಜೈಲು ಪಾಲಾಗಿದ್ದ ನೂರಾರು ಶಿಕ್ಷೆಗೊಳಗಾದ ಉಗ್ರರನ್ನು ಈಗ ಮುಕ್ತವಾಗಿ ಬಿಡುಗಡೆ ಮಾಡಲಾಗಿದೆ. ಹಿಜ್ಬ್ ಉತ್-ತಹ್ರೀರ್ ಸೇರಿದಂತೆ ಅನೇಕ ತೀವ್ರವಾದಿ ಸಂಘಟನೆಗಳು ಈಗ ಬಾಂಗ್ಲಾದೇಶದಲ್ಲಿ ಬಹಿರಂಗವಾಗಿ ಕಾರ್ಯಾಚರಣೆ ನಡೆಸುತ್ತಿವೆ," ಎಂದು ದೂರಿದರು.
"ಇದನ್ನು ಈಗಲೇ ತಡೆಯದಿದ್ದರೆ, ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮುವ ಮುಂದಿನ ತಲೆಮಾರಿನ ಭಯೋತ್ಪಾದಕರು ಬಾಂಗ್ಲಾದೇಶದಿಂದಲೇ ಬರಲಿದ್ದಾರೆ," ಎಂದು ಅವರು ಗಂಭೀರವಾಗಿ ಎಚ್ಚರಿಸಿದರು.
ಮಾನವ ಹಕ್ಕುಗಳ ಸಂಪೂರ್ಣ ಹನನ:
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ ಅವರು, "ಬಾಂಗ್ಲಾದೇಶವು ವಿಫಲಗೊಳ್ಳುತ್ತಿರುವ ರಾಷ್ಟ್ರವಲ್ಲ, ಬದಲಿಗೆ ಈಗಾಗಲೇ ಸಂಪೂರ್ಣವಾಗಿ 'ವಿಫಲಗೊಂಡ ದೇಶ'ವಾಗಿದೆ. ಅಲ್ಲಿ ಮಾನವ ಹಕ್ಕುಗಳಾಗಲಿ ಅಥವಾ ವಾಕ್ ಸ್ವಾತಂತ್ರ್ಯವಾಗಲಿ ಉಳಿದಿಲ್ಲ. ಈ ಕಾರ್ಯಕ್ರಮದ ವರದಿಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಅಲ್ಲಿನ ಗುಪ್ತಚರ ಸಂಸ್ಥೆಗಳು ಪ್ರಮುಖ ಟಿವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಿಗೆ ಬೆದರಿಕೆ ಹಾಕಿವೆ," ಎಂದು ಆರೋಪಿಸಿದರು.
ಇದೇ ವೇಳೆ ವೀಡಿಯೋ ಮೂಲಕ ಮಾತನಾಡಿದ ಮಾಜಿ ಪ್ರಧಾನಿ ಶೇಖ್ ಹಸೀನಾ, 2024 ರ ಜುಲೈ-ಆಗಸ್ಟ್‌ನಲ್ಲಿ ನಡೆದ ಪ್ರತಿಭಟನೆಯನ್ನು ತಮ್ಮ ಸರ್ಕಾರ ನಿರ್ವಹಿಸಿದ ರೀತಿಯನ್ನು ಸಮರ್ಥಿಸಿಕೊಂಡರು. "ಅದು ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ. ಕೋಟಾ ಸುಧಾರಣೆಯ ನೆಪದಲ್ಲಿ ಸರ್ಕಾರವನ್ನು ಕೆಡವಲು ಯೋಜಿತವಾಗಿ ನಡೆಸಿದ ಹಿಂಸಾತ್ಮಕ ರಾಜಕೀಯ ಪಿತೂರಿಯಾಗಿತ್ತು," ಎಂದು ಪ್ರತಿಪಾದಿಸಿದರು.

