ದಾವಣಗೆರೆ: "ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಹೈಕಮಾಂಡ್ ಅಥವಾ ಪಕ್ಷದ ವಿರುದ್ಧ ಎಲ್ಲಿಯೂ ಕೆಟ್ಟದಾಗಿ ಮಾತನಾಡಿಲ್ಲ. ವೈರಲ್ ಆಡಿಯೋದಲ್ಲಿ ನಂಜಯ್ಯನಮಠ ಅವರು ಮಾತನಾಡಿದ್ದಾರೆಯೇ ಹೊರತು ನಾನಲ್ಲ" ಎಂದು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಿಂದ ಹೊರಗುಳಿದಿರುವುದು ಹಾಗೂ ಪಕ್ಷದೊಳಗಿನ ಪ್ರಸ್ತುತ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದರು.
ಹೈಕಮಾಂಡ್‌ಗೆ ಮಿಸ್ ಗೈಡ್ ಮಾಡಿರಬಹುದು
"ಹೊಸ ಮುಖ್ಯಮಂತ್ರಿಗಳು ಬಂದಾಗ ತಮ್ಮದೇ ಆದ ನೂತನ ಸಚಿವ ಸಂಪುಟ ರಚಿಸಿಕೊಳ್ಳುವುದು ಸಹಜ ಪ್ರಕ್ರಿಯೆ. ಅದರಲ್ಲಿ ಬೇಸರ ಪಟ್ಟುಕೊಳ್ಳುವಂತದ್ದು ಏನೂ ಇಲ್ಲ. ಆದರೆ ನನ್ನ ವಿರುದ್ಧ ಯಾರೋ ಹೈಕಮಾಂಡ್‌ಗೆ ಇಲ್ಲಸಲ್ಲದ ಸುಳ್ಳು ದೂರುಗಳನ್ನು ನೀಡಿ ತಪ್ಪು ದಾರಿಗೆ ಎಳೆದಿರಬಹುದು. ಇದರಿಂದಲೇ ಸಚಿವ ಸ್ಥಾನ ಕೈತಪ್ಪಿರಬಹುದು. ಮಂತ್ರಿಗಿರಿ ತಪ್ಪಿದ್ದಕ್ಕೆ ಮನಸ್ಸಿಗೆ ನೋವಾಗಿದೆ. ಸಿಎಂ ಅವರು ಮುಂಚಿತವಾಗಿಯೇ ನನ್ನನ್ನು ಕರೆದು ಮಾತುಕತೆ ನಡೆಸಿ ಕಾರಣ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಅಭಿಪ್ರಾಯಪಟ್ಟರು.
ರಾಜಕಾರಣದಲ್ಲಿ ಷಡ್ಯಂತ್ರ ಸಹಜ
ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ನೀಡಿದ ಅವರು, "ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ, ಆದರೆ ಅದನ್ನು ಯಾರು ಸಾಬೀತು ಮಾಡಿದ್ದಾರೆ? ಈ ಜಗತ್ತಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಕೆಂಪೇಗೌಡರ ಮೇಲೆಯೂ ಆರೋಪಗಳು ಬಂದಿದ್ದವು. ಅವು ನಿಜವಾದವೇ? ಅಬಕಾರಿ ಸಚಿವನಾಗಿದ್ದಾಗ ಇಲಾಖೆಯಲ್ಲಿ 20ಕ್ಕೂ ಹೆಚ್ಚು ಹೊಸ ಸುಧಾರಣೆಗಳನ್ನು ತಂದಿದ್ದೆ. ಯಾವುದೇ ಅವ್ಯವಹಾರ ಸಾಬೀತಾಗಿಲ್ಲ. ರಾಜಕಾರಣದಲ್ಲಿ ಇಂತಹ ಷಡ್ಯಂತ್ರಗಳು ಸಹಜ. ನನಗೆ ಸ್ಥಾನಮಾನಕ್ಕಿಂತ ಪಕ್ಷವೇ ಮೊದಲು" ಎಂದು ಹೇಳಿದರು.
ರಾಜೀನಾಮೆ ನಿರ್ಧಾರ ಸರಿಯಲ್ಲ
ಶಾಸಕರ ರಾಜೀನಾಮೆ ಪರ್ವದ ಕುರಿತು ಪ್ರತಿಕ್ರಿಯಿಸಿದ ತಿಮ್ಮಾಪುರ, "ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡುವುದು ಸರಿಯಾದ ಕ್ರಮವಲ್ಲ. ಶಾಸಕರು ಪಕ್ಷದಲ್ಲೇ ಇದ್ದುಕೊಂಡು ತಮ್ಮ ಹಕ್ಕನ್ನು ಪ್ರತಿಪಾದಿಸಬೇಕು. ನಮ್ಮ ಮುಖ್ಯಮಂತ್ರಿಗಳು ಎಲ್ಲವನ್ನೂ ಸರಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ನನಗೆ ಮಂತ್ರಿಗಿರಿ ಸಿಗದಿದ್ದಕ್ಕೆ ಅಭಿಮಾನಿಗಳಿಗೆ ಅಸಮಾಧಾನ ಇರುವುದು ಸಹಜ. ಈಗ ನೂತನ ಸಂಪುಟದಲ್ಲಿ ಯುವಕರಿಗೆ ಅವಕಾಶ ಸಿಕ್ಕಿದೆ, ಅವರು ಉತ್ತಮ ಕೆಲಸ ಮಾಡಲಿ" ಎಂದು ಶುಭ ಹಾರೈಸಿದರು.

