ಚೀನಾ-ನೇಪಾಳ ಗಡಿಯಲ್ಲಿರುವ ಗೈರಾಂಗ್ ಪೋರ್ಟ್ ವಲಸೆ ಕೇಂದ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಸಿಲುಕಿರುವ ಈಶಾ ಫೌಂಡೇಶನ್‌ನ ಯಾತ್ರಿಕರು ಜೀವಂತವಾಗಿ ಬದುಕುಳಿದಿರುವ ಯಾವುದೇ ಆಶಾದಾಯಕ ಸೂಚನೆಗಳು ಲಭ್ಯವಾಗಿಲ್ಲ ಎಂದು ಸಂಸ್ಥೆ ಶನಿವಾರ ತಿಳಿಸಿದೆ.
ಎರಡನೇ ಬಾರಿಗೆ ಪ್ರವಾಹ ಬರುವ ಅಪಾಯವಿದ್ದಿದ್ದರಿಂದ ಆಗಸ್ಟ್ 28 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚೀನಾ ಅಧಿಕಾರಿಗಳು ಈಗ ಮತ್ತೆ ಆರಂಭಿಸಿದ್ದಾರೆ.
ಗೈರಾಂಗ್ ಪೋರ್ಟ್‌ನ ವಲಸೆ ಕಚೇರಿ ಸಂಕೀರ್ಣವು ಸಂಪೂರ್ಣವಾಗಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ತಿಳಿಸಿರುವ ಈಶಾ ಫೌಂಡೇಶನ್, ಪ್ರತ್ಯಕ್ಷದರ್ಶಿಗಳು ಹಾಗೂ ಲಭ್ಯವಿರುವ ಆಧಾರಗಳ ಮೂಲಕ ಈ ವಿನಾಶದ ತೀವ್ರತೆಯನ್ನು ದೃಢಪಡಿಸಿದೆ. ಈಶಾ ಸಂಸ್ಥೆಯ ತಂಡಗಳು ಗಡಿಯ ಎರಡೂ ಬದಿಗಳಲ್ಲಿ ತಂಗಿದ್ದು, ಚೀನಾ ಭಾಗದಲ್ಲಿರುವ ತಂಡವು ಗೈರಾಂಗ್‌ನಿಂದ ಸುಮಾರು 25 ಕಿ.ಮೀ ದೂರದಲ್ಲಿದ್ದುಕೊಂಡು ರಕ್ಷಣಾ ಅಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದೆ. ನೇಪಾಳ ಮತ್ತು ಚೀನಾ ಸರ್ಕಾರಗಳು ಬಿಡುಗಡೆ ಮಾಡಿರುವ ಬದುಕುಳಿದವರ ಪಟ್ಟಿಯಲ್ಲಿ ಇದುವರೆಗೆ ಈಶಾ ಯಾತ್ರಿಕರ ಗುಂಪಿನ ಯಾವುದೇ ಸದಸ್ಯರ ಹೆಸರುಗಳು ಕಂಡುಬಂದಿಲ್ಲ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಗೈರಾಂಗ್ ಪೋರ್ಟ್ ಕಣಿವೆಯು ಅಂದಾಜು 45 ರಿಂದ 50 ಅಡಿಗಳಷ್ಟು ಹೂಳು ಹಾಗೂ ಕಸ-ಕಡ್ಡಿಗಳಿಂದ ಆವೃತವಾಗಿದೆ. ಪ್ರವಾಹ ಉಂಟಾದಾಗ ಕೆಸರು ಮತ್ತು ನೀರಿನ ಮಿಶ್ರಣವು ಬೃಹತ್ ಪ್ರಮಾಣದಲ್ಲಿ ಅಪ್ಪಳಿಸಿ ಇಡೀ ಕಟ್ಟಡ ಸಂಕೀರ್ಣವನ್ನೇ ಧ್ವಂಸಗೊಳಿಸಿರುವುದರಿಂದ, ಈ ಭೀಕರ ಪ್ರವಾಹದ ಸೆಳೆತಕ್ಕೆ ಯಾರಾದರೂ ಬದುಕುಳಿದಿರಲು ಸಾಧ್ಯವೇ ಇಲ್ಲ ಎಂದು ಸ್ಥಳೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ 26 ರಂದು ಸಂಭವಿಸಿದ ಈ ಜಲಪ್ರಳಯದಲ್ಲಿ ಮನೆಗಳು, ರಸ್ತೆಗಳು ಕೊಚ್ಚಿಹೋಗಿದ್ದು, ಚೀನಾ ಮತ್ತು ನೇಪಾಳದ ಅಧಿಕೃತ ಮಾಹಿತಿಯಂತೆ ಇದುವರೆಗೆ 682 ಮೃತದೇಹಗಳು ಪತ್ತೆಯಾಗಿವೆ ಹಾಗೂ ಸುಮಾರು 3,000 ಜನರು ಇಂದಿಗೂ ನಾಪತ್ತೆಯಾಗಿದ್ದಾರೆ.v

