ಕಲಬುರಗಿ : ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಹೆಂಡತಿ ಮೇಲಿನ ಕೋಪಕ್ಕೆ ಹಡೆದ ಮಗುವನ್ನೇ ಬಲಿ ಪಡೆದಿರುವ ಅತ್ಯಂತ ಕ್ರೂರ ಹಾಗೂ ಅಮಾನವೀಯ ಘಟನೆ ವರದಿಯಾಗಿದೆ. ಪತ್ನಿಯೊಂದಿಗೆ ನಡೆದ ಕ್ಷುಲ್ಲಕ ಜಗಳದ ಸೇಡನ್ನು ಕಂದಮ್ಮನ ಮೇಲೆ ತೀರಿಸಿಕೊಂಡಿರುವ ಪಾಪಿ ತಂದೆಯೊಬ್ಬ ತನ್ನ ನಾಲ್ಕು ವರ್ಷದ ಹಸುಗೂಸನ್ನು ನಾಗರಾಳ ಜಲಾಶಯಕ್ಕೆ ಎಸೆದು ಹತ್ಯೆ ಮಾಡಿದ್ದಾನೆ.
ಸೋಮರಾವ್ ಹೂಗಾರ್ ಮಗುವನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಸೋಮರಾವ್ ಹಾಗೂ ಆತನ ಪತ್ನಿ ಕಲ್ಪನಾ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ಹಾಗೂ ಗಲಾಟೆ ನಡೆದಿದೆ. ಹೆಂಡತಿ ಜತೆ ಜಗಳವಾಡಿದ ಆಕ್ರೋಶ ಹಾಗೂ ಸಿಟ್ಟಿನಲ್ಲಿ ಉದ್ರೇಕಗೊಂಡ ಸೋಮರಾವ್, ಮನೆಯಲ್ಲಿದ್ದ ನಾಲ್ಕು ವರ್ಷದ ಮಗು ಗುಂಡೇಶ್‌ನನ್ನು ಪ್ರೀತಿಯಿಂದ ಎತ್ತಿಕೊಂಡು ಆಟವಾಡಿಸುವುದಾಗಿ ನಂಬಿಸಿ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ನೇರವಾಗಿ ನಾಗರಾಳ ಜಲಾಶಯದ ಬಳಿಗೆ ತೆರಳಿ, ಕರುಳುಬಳ್ಳಿಯೆಂದೂ ನೋಡದೆ ಹಸುಗೂಸನ್ನು ಜೀವಂತವಾಗಿ ನೀರಿನೊಳಗೆ ಎಸೆದಿದ್ದಾನೆ.
ಮಗು ಮತ್ತು ಗಂಡ ಇಬ್ಬರೂ ಕಾಣೆಯಾಗCದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ಕಲ್ಪನಾ ಸುತ್ತಮುತ್ತ ಹುಡುಕಾಡಿದ್ದಾರೆ. ಈ ವೇಳೆ ಪತಿ ಸೋಮರಾವ್ ನಡೆಸಿದ ಕೃತ್ಯದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ತಕ್ಷಣವೇ ಕಲ್ಪನಾ ಅವರು ಚಿಂಚೋಳಿ ಪೊಲೀಸ್ ಠಾಣೆಗೆ ತೆರಳಿ ತನ್ನ ಗಂಡನ ವಿರುದ್ಧ ಮಗುವನ್ನು ಕೊಲೆ ಮಾಡಿರುವ ಕುರಿತು ಅಧಿಕೃತ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ತಕ್ಷಣವೇ ಕಾರ್ಯಪ್ರವೃತ್ತರಾದ ಚಿಂಚೋಳಿ ತ್ಯಾಜ್ಯ ಮತ್ತು ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ನಾಗರಾಳ ಜಲಾಶಯದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ತೀವ್ರ ಹುಡುಕಾಟದ ಬಳಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ದುರ್ದೈವಿ ಮಗು ಗುಂಡೇಶ್‌ನ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ನಿ ಜತೆಗಿನ ವೈಯಕ್ತಿಕ ದ್ವೇಷಕ್ಕೆ ಮುಗ್ಧ ಮಗುವಿನ ಪ್ರಾಣ ತೆಗೆದ ನರರೂಪಿ ರಾಕ್ಷಸ ಸೋಮರಾವ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಂಧಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಹೆಂಡತಿಯ ಮೇಲಿನ ಸಿಟ್ಟಿಗೆ ಹಸುಗೂಸಿನ ಪ್ರಾಣ ತೆಗೆದ ಈ ಪೈಶಾಚಿಕ ಕೃತ್ಯವು ಗ್ರಾಮಸ್ಥರನ್ನು ಹಾಗೂ ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ.

