ರಾಷ್ಟ್ರೀಯ ಪೌರತ್ವ ನೋಂದಣಿ (NRC) ದಾಖಲೆಗಳು, ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಸೇರಿದಂತೆ ಬರೋಬ್ಬರಿ 15 ಅಧಿಕೃತ ಸರ್ಕಾರಿ ದಾಖಲೆಗಳನ್ನು ಸಲ್ಲಿಸಿದ್ದರೂ, ಗುವಾಹಟಿಯ ನಿವಾಸಿಯೊಬ್ಬರು ತಾವು ಭಾರತದ ಪ್ರಜೆ ಎಂಬುದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ .
ವಿದೇಶಿಗರ ಕಾಯ್ದೆ 1946 ರ ಸೆಕ್ಷನ್ 9 ರ ಅಡಿಯಲ್ಲಿ ತಾನು ವಿದೇಶಿಯಲ್ಲ, ಬದಲಿಗೆ ಭಾರತೀಯ ನಾಗರಿಕ ಎಂಬುದನ್ನು ಸಾಬೀತುಪಡಿಸುವ ಕಾನೂನುಬದ್ಧ ಜವಾಬ್ದಾರಿಯನ್ನು ಅರ್ಜಿದಾರರು ಪೂರೈಸಿಲ್ಲ ಎಂದು ಗೌಹಾತಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನಾ ಮತ್ತು ನ್ಯಾಯಮೂರ್ತಿ ಶಮೀಮಾ ಜಹಾನ್ ಅವರಿದ್ದ ವಿಭಾಗೀಯ ಪೀಠವು, ತಮ್ಮನ್ನು ವಿದೇಶಿ ಪ್ರಜೆ ಎಂದು ಘೋಷಿಸಿದ್ದ 2019 ರ ವಿದೇಶಿಗರ ನ್ಯಾಯಾಧಿಕರಣದ (Foreigners Tribunal) ಆದೇಶವನ್ನು ಪ್ರಶ್ನಿಸಿ ಅಮಿನ್ ಉಲ್ ಹಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರ ಅಮಿನ್ ಉಲ್ ಹಕ್ ತಾನು ಹುಟ್ಟಿನಿಂದಲೇ ಭಾರತದ ಪ್ರಜೆಯಾಗಿದ್ದು, ಅಸ್ಸಾಂ ಪೌರತ್ವದ ಕಟ್-ಆಫ್ ದಿನಾಂಕವಾದ ಮಾರ್ಚ್ 24, 1971 ಕ್ಕಿಂತ ಮುಂಚಿನಿಂದಲೇ ತಮ್ಮ ಕುಟುಂಬ ಅಸ್ಸಾಂನಲ್ಲಿ ವಾಸಿಸುತ್ತಿತ್ತು ಎಂದು ವಾದಿಸಿದ್ದರು. ಇದಕ್ಕಾಗಿ ಅವರು 1951 ರ ಎನ್‌ಆರ್‌ಸಿ ದಾಖಲೆಗಳು, 1966 ರಿಂದ ಇತ್ತೀಚಿನವರೆಗಿನ ಮತದಾರರ ಪಟ್ಟಿಗಳು, 1973 ರ ಭೂಮಿ ಖರೀದಿ ಪತ್ರ, ಪ್ಯಾನ್ ಕಾರ್ಡ್, ವೋಟರ್ ಐಡಿ ಮತ್ತು ಶಾಲೆಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಮಂಡಿಸಿದ್ದರು. ಆದರೆ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಹೈಕೋರ್ಟ್, ಇವೆಲ್ಲವೂ ಕೇವಲ ವ್ಯಕ್ತಿಯ ಗುರುತಿನ ಚೀಟಿಗಳೇ ಹೊರತು ಪೌರತ್ವದ ಅಂತಿಮ ಪುರಾವೆಗಳಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇತ್ತೀಚೆಗಷ್ಟೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಪಾಸ್‌ಪೋರ್ಟ್ ಕೂಡ ಕೇವಲ ಪ್ರಯಾಣದ ದಾಖಲೆಯಾಗಿದೆಯೇ ಹೊರತು ಪೌರತ್ವದ ಅಂತಿಮ ಸಾಕ್ಷಿಯಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಚಾರಣೆ ವೇಳೆ ಅರ್ಜಿದಾರರ ತಂದೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಈತ ತನ್ನದೇ ಮಗ ಎಂದು ಮೌಖಿಕ ಸಾಕ್ಷಿ ನುಡಿದಿದ್ದರು. ಆದರೆ ಸೂಕ್ತ ಮತ್ತು ಕಾನೂನುಬದ್ಧ ದಾಖಲೆಗಳಿಲ್ಲದ ಕೇವಲ ಬಾಯಿಮಾತಿನ ಸಾಕ್ಷ್ಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಅರ್ಜಿದಾರರು ಸಲ್ಲಿಸಿದ್ದ ಕಂಪ್ಯೂಟರ್ ಮುದ್ರಿತ 1951 ರ ಎನ್‌ಆರ್‌ಸಿ ಪ್ರತಿಯನ್ನು ಎಲೆಕ್ಟ್ರಾನಿಕ್ ದಾಖಲೆಗಳ ನಿಯಮದಡಿ ಸಾಬೀತುಪಡಿಸದ ಕಾರಣ ತಿರಸ್ಕರಿಸಲಾಗಿದೆ.
ಹಕ್ ಅವರ ಪೋಷಕರು ಮತ್ತು ತಾತ-ಮುತ್ತಾತಂದಿರ ದಾಖಲೆಗಳಲ್ಲಿದ್ದ ವಯಸ್ಸು, ವಿಳಾಸ ಹಾಗೂ ಹೆಸರಿನ ಕಾಗುಣಿತದ (Spelling) ಗಂಭೀರ ವ್ಯತ್ಯಾಸಗಳನ್ನು ನ್ಯಾಯಾಲಯ ಪತ್ತೆಹಚ್ಚಿದೆ. ಬ್ರಹ್ಮಪುತ್ರ ನದಿಯ ಪ್ರವಾಹದಿಂದಾಗಿ ತಮ್ಮ ಜಮೀನು ಕೊಚ್ಚಿಹೋಗಿ ಬೇರೆ ಬೇರೆ ಹಳ್ಳಿಗಳಿಗೆ ವಲಸೆ ಹೋಗಿದ್ದರಿಂದ ಈ ವ್ಯತ್ಯಾಸವಾಗಿದೆ ಎಂಬ ಹಕ್ ಅವರ ವಾದಕ್ಕೆ ಯಾವುದೇ ಸ್ವತಂತ್ರ ಲಿಖಿತ ಪುರಾವೆಗಳು ಇಲ್ಲದ ಕಾರಣ, ಹೈಕೋರ್ಟ್ ನ್ಯಾಯಾಧಿಕರಣದ ಹಳೆಯ ಆದೇಶವನ್ನೇ ಎತ್ತಿಹಿಡಿದು ಈತನನ್ನು ವಿದೇಶಿಗ ಎಂದು ಪರಿಗಣಿಸಿದೆ.

