ಬೆಂಗಳೂರು : ರಾಜ್ಯ ಸರ್ಕಾರವು ಖಜಾನೆ ಇಲಾಖೆಯ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ನೌಕರರ ವೇತನ ಮತ್ತು ಲೆಕ್ಕಪತ್ರ ಅಧಿಕಾರಿಗಳ (PAO) ಕಚೇರಿಗಳಲ್ಲಿ ನಡೆಯುತ್ತಿದ್ದ ವೇತನ ಹಾಗೂ ಬಿಲ್ ಪಾವತಿ ಪ್ರಕ್ರಿಯೆಯನ್ನು ಕೇಂದ್ರೀಕೃತ ವ್ಯವಸ್ಥೆಯಡಿ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ.
ಖಜಾನೆ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಆದೇಶದಂತೆ, ಜುಲೈ 12, 2026ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದೆ.
ಹೊಸ ವ್ಯವಸ್ಥೆಯಡಿ ಜಿಲ್ಲಾ ಖಜಾನೆ ಕಚೇರಿಗಳಲ್ಲಿ ನಡೆಯುತ್ತಿದ್ದ ವೇತನ ಬಿಲ್ ತಯಾರಿಕೆ, ಪರಿಶೀಲನೆ, ಪಾವತಿ ಸೇರಿದಂತೆ ಹಲವು ಹಣಕಾಸು ಸೇವೆಗಳನ್ನು ಬೆಂಗಳೂರಿನ ಖಜಾನೆ ಆಯುಕ್ತರ ಕಚೇರಿಯಲ್ಲಿರುವ ಕೇಂದ್ರೀಕೃತ ವೇತನ ಮತ್ತು ಲೆಕ್ಕಪತ್ರ ಅಧಿಕಾರಿ (PAO) ಕಚೇರಿ ಮೂಲಕ ನಿರ್ವಹಿಸಲಾಗುತ್ತದೆ.
ಯಾವ ಇಲಾಖೆಗಳು ಒಳಪಡುವವು?
ಈ ಆದೇಶದಡಿ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಸಹಾಯಕ ಖಜಾನಾಧಿಕಾರಿಗಳು, ಮುಖ್ಯ ಲೆಕ್ಕಿಗರು, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಗ್ರೂಪ್-ಡಿ ಸಿಬ್ಬಂದಿ, ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳ ವೇತನ ನಿರ್ವಹಣೆ ಕೇಂದ್ರೀಕೃತವಾಗಲಿದೆ.
ಹೊಸ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ?
ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ನೌಕರರ ವೇತನ ಬಿಲ್ಗಳನ್ನು ಕೇಂದ್ರೀಕೃತ PAO ಕಚೇರಿ ಸಿದ್ಧಪಡಿಸುತ್ತದೆ.
ವಿವಿಧ ಇಲಾಖೆಗಳ ಡಿಡಿಒ (DDO)ಗಳು ಅಗತ್ಯ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
NPS, UPS, LIC, HDFC ಸೇರಿದಂತೆ ವಿವಿಧ ಕಡಿತಗಳು ಹಾಗೂ ಬ್ಯಾಂಕ್ ವರ್ಗಾವಣೆ (NEFT) ಪ್ರಕ್ರಿಯೆಯೂ ಕೇಂದ್ರೀಕೃತವಾಗಿ ನಡೆಯಲಿದೆ.
ವೇತನ, ಬಿಲ್ ಹಾಗೂ ಇತರೆ ಪಾವತಿಗಳಲ್ಲಿ ಪಾರದರ್ಶಕತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರದ ಉದ್ದೇಶ
ಖಜಾನೆ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ಹಾಗೂ ಕೇಂದ್ರೀಕೃತಗೊಳಿಸುವ ಮೂಲಕ ಆಡಳಿತಾತ್ಮಕ ವಿಳಂಬ ಕಡಿಮೆ ಮಾಡುವುದು, ಹಣಕಾಸು ವ್ಯವಹಾರಗಳಲ್ಲಿ ಏಕರೂಪತೆ ತರುವುದು ಹಾಗೂ ಸರ್ಕಾರಿ ನೌಕರರಿಗೆ ವೇತನ ಪಾವತಿಯನ್ನು ಇನ್ನಷ್ಟು ಸುಗಮಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.
ಈ ಆದೇಶವನ್ನು ಖಜಾನೆ ಇಲಾಖೆಯ ಎಲ್ಲಾ ಅಧಿಕಾರಿಗಳು, ಜಿಲ್ಲಾ ಖಜಾನೆ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಗಳ ಮುಖ್ಯಸ್ಥರಿಗೆ ಪಾಲನೆಗಾಗಿ ರವಾನಿಸಲಾಗಿದೆ.

