Kannada News Now

1.7M Followers

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಶೀಘ್ರದಲ್ಲಿ 7ನೇ ವೇತನ ರಚನೆ ಸಿಎಂ ಬೊಮ್ಮಾಯಿ ಘೋಷಣೆ

21 Apr 2022.2:55 PM

ಶಿವಮೊಗ್ಗ: ಸರ್ಕಾರಿ ನೌಕರರಲ್ಲಿ ಸ್ಥಿತಪ್ರಜ್ಞೆ ಹಾಗೂ ಸಮಯಪ್ರಜ್ಞೆ ಬಹಳ ಮುಖ್ಯ. ದಕ್ಷತೆಯಿಂದ ನಿಗದಿತ ಸಮಯದೊಳಗೆ ಜನರಿಗೆ ಕೆಲಸ ಮಾಡಿಕೊಡಬೇಕು. ಪಟ್ಟಭದ್ರಹಿತಾಸಕ್ತಿಗಳು ಅಲ್ಲೋಲಕಲ್ಲೋಲ ಮಾಡಲು ಪ್ರಯತ್ನಿಸುತ್ತಾರೆ. ಅದರೆ ದಕ್ಷತೆ, ಪ್ರಾಮಾಣಿಕತೆ, ಕಾರ್ಯಕ್ಷಮತೆಯಿಂದ ಅವರಿಗೆ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಜವಾಬ್ದಾರಿ ಅರಿತು ಹುದ್ದೆಗೆ ನ್ಯಾಯ ಒದಗಿಸಿ ದೇಶದಲ್ಲಿ ಅತ್ಯಂತ ದಕ್ಷ ನೌಕರರು ಎಂದು ಕರ್ನಾಟಕದ ಸರ್ಕಾರಿ ನೌಕರರು ಹೆಸರುವಾಸಿಯಾಗಿದ್ದಾರೆ. ಹಲವಾರು ದಶಕಗಳಿಂದ ಕೆಲಸ ಮಾಡಿರುವ ನೌಕರರು ಹಾಗೂ ಅಧಿಕಾರಿಗಳು ಕಾರಣ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಕರ್ತವ್ಯ ಹಾಗೂ ನೈತಿಕ ಜವಾಬ್ದಾರಿ ನಮ್ಮದು. ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ನಮ್ಮ ಹುದ್ದೆಗೆ, ಕರ್ತವ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯ. ಇದರ ಮಹತ್ವ ಅರಿಯುವವವರೆಗೆ ನ್ಯಾಯ ನೀಡಲು ಆಗುವುದಿಲ್ಲ. ಆಡಳಿತ ಹಾಗೂ ಆಡಳಿತ ಎಂದರೇನು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ನಮ್ಮ ಪಾತ್ರವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಕರ್ನಾಟಕದ ಅಭಿವೃದ್ಧಿಗೆ ಕಾಣಿಕೆ ನೀಡಬಹುದು ಎಂದರು.

ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಎಂದೂ ಬಳಕೆ ಮಾಡಬಾರದು ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯ ಕೇಂದ್ರ ಸರ್ಕಾರಗಳ ಪಾತ್ರವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರಿ ನೌಕರರ ಅಧಿಕಾರವನ್ನು ಜನಪರವಾಗಿ ಬಳಕೆ ಮಾಡಬೇಕೆ ಹೊರತು ವೈಯಕ್ತಿಕ ಲಾಭಕ್ಕಾಗಿ ಎಂದೂ ಬಳಕೆ ಮಾಡಬಾರದು. ಕಾನೂನು ಬದ್ಧವಾಗಿ ಕೆಲಸ ಮಾಡಬೇಕು ಎಂದರು.

ಬಡವರ ಪರವಾಗಿ ಕೆಲಸ ಮಾಡಿ: ವಿವರಣೆ ನೀಡುವ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ಬಡವನ ಬಗ್ಗೆ ಚಿಂತನೆ ಮಾಡಿ, ಅವನ ಕಣ್ಣೀರಿನ ನೆನಪು ಮಾಡಿಕೊಂಡು ನಿರ್ಣಯ ಮಾಡಬೇಕು. ಶ್ರೀಮಂತರ ಪರವಾಗಿ ಅಲ್ಲ ಎಂದರು. ಬಡವರಿಗೆ, ಜನಸಾಮಾನ್ಯರಿಗೆ ಒಳ್ಳೆಯದಾಗುವ ಒಂದು ಸಕಾರಣವಿದ್ದರೆ ಆ ಕೆಲಸವನ್ನು ಮಾಡಿ. ಕಡತಗಳಲ್ಲಿ ಅಭಿಪ್ರಾಯಗಳನ್ನು ನಮೂದಿಸಬೇಕು. ಆಗ ಎಲ್ಲಾ ದಿಕ್ಕಿನಿಂದ ವಿಷಯ ಅಭ್ಯಾಸ ಮಾಡಬಹುದು. ನಿರ್ಣಯ ತೆಗೆದುಕೊಳ್ಳುವ ಹಂತಗಳನ್ನು ಕಡಿಮೆ ಮಾಡಲು ಆಡಳಿತ ಸುಧಾರಣಾ 2 ನೇ ಆಯೋಗ ತನ್ನ ಮಧ್ಯಂತರ ವರಡಿಯನ್ನು ನೀಡಿದೆ. ಅವುಗಳ ಸುಧಾರಣೆಗೆ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ.ಕೇವಲ ಏಕಪಕ್ಷೀಯ ವಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ಒಂದೇ ಮನೋಭಾವದಿಂದ ಕೆಲಸ ಮಾಡಬೇಕು ಎಂದರು.

ನಿಗದಿತ ಸಮಯದಲ್ಲಿ ಕೆಲಸ *ಮಾಡಲು ತಂತ್ರಜ್ಞಾನದ ಬಳಕೆ ಮಾಡಿ : ಜಾಗತೀಕರಣ, ಉದಾರೀಕರಣವಾದ ನಂತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆಗಳಾಗಿವೆ.ಇದರ ಪರಿಣಾಮ ಸರ್ಕಾರ ಹಾಗೂ ಸರ್ಕಾರಿ ನೌಕರರ ಮೇಲೂ ಆಗಿದೆ.ಸರ್ಕಾರ, ಖಾಸಗಿ ಸಹಭಾಗಿತ್ವ ದಲ್ಲಿ ಕೆಲಸಗಳಾಗುತ್ತಿವೆ. ಬದಲಾದ ಕಾಲದಲ್ಲಿ ನಮ್ಮ ಕಾರ್ಯವೈಖರಿ ಚಿಂತನೆ, ನಿರ್ಧಾರ ಮಾಡುವ ಮಾಡುವ ರೀತಿ ಬದಲಾಗಬೇಕು. ತಂತ್ರಜ್ಞಾನದ ಬಳಕೆ ಮಾಡಲು ನೀವೆಲ್ಲರೂ ಸಮರ್ಥರಾದರೆ ಬಹಳ ನಿರ್ಣಯಗಳು ಬೇಗ ಆಗುತ್ತದೆ. ನಿಗದಿತ ಸಮಯದಲ್ಲಿ ಕೆಲಸ ಆಗಬೇಕಾದರೆ ತಂತ್ರಜ್ಞಾನದ ಅವಶ್ಯಕತೆ ಇದೆ. ಗ್ರಾಮ ಪಂಚಾಯಿತಿ ಇಂದ ಹಿಡಿದು ವಿಧಾನಸಭೆಯವರೆಗೂ ತಂತ್ರಜ್ಞಾನ ಬಳಕೆಯಾಗಬೇಕು. ನಿಗದಿತ ಸಮಯದಲ್ಲಿ ನಿರ್ಣಯ ಮಾಡಿದರೆ ಅದು ನಿಮ್ಮ ದಕ್ಷತೆ,ಕಳಕಳಿಗೆ ಹಿಡಿದ ಕನ್ನಡಿ ಎಂದರು.

ಕಚೇರಿಗಳಿಗೆ ಜನರ ಓಡಾಟವನ್ನು ತಪ್ಪಿಸಿ : ನಿಗದಿತ ಸಮಯದಲ್ಲಿ ಕೆಲಸ ಮಾಡುವ ಮೂಲಕ ಕಚೇರಿಗಳಿಗೆ ಜನರ ಓಡಾಟವನ್ನು ತಪ್ಪಿಸಿ, ಆಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮುಕ್ತವಾಗುತ್ತದೆ.. ಬಡಜನರ ಬೆವರಿನ ತೆರಿಗೆ ಹಣದಿಂದ ಸರ್ಕಾರಿ ನೌಕರರ ಸಂಬಳ ಬರುತ್ತದೆ. ಆ ಬೆವರಿಗೆ ಬೆಲೆ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. 2 ಲಕ್ಷಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿಯಿದ್ದರೂ ಕಾರ್ಯಾಂಗಕ್ಕೆ ಯಾವುದೇ ತೊಡಕಾಗದಂತೆ ಕೆಲಸ ನಿರ್ವಹಿಸುತ್ತಿರುವುದು ಸಂತೋಷ ತಂದಿದೆ. ವರ್ಷಕ್ಕೆ ಎರಡು ಬಾರಿ ಡಿಎ ಅನ್ನು ಕೇಂದ್ರ ಸರ್ಕಾರ ಘೋಷಣೆಯ ಕೇವಲ ಒಂದು ದಿನದೊಳಗೆ ಘೋಷಣೆ ಮಾಡಿದೆ. ವೇತನ ಆಯೋಗ ರಚನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಡಳಿತದಲ್ಲಿ ದಕ್ಷತೆಯಿಂದ ಶುದ್ಧತೆ ಬರುತ್ತದೆ : ಜನರ ಬಗ್ಗೆ ಸಾಂತ್ವನ, ಬಡವರ ಬಗ್ಗೆ ಕನಿಕರ, ರಾಜ್ಯದ ಅಭಿವೃದ್ಧಿ ಬಗ್ಗೆ ಕಳಕಳಿ ಇರಬೇಕು. ಭ್ರಷ್ಟಾಚಾರಕ್ಕೆ ಸರ್ಕಾರ ಯಾವುದೇ ರಾಜಿ ಇಲ್ಲದೇ ಕ್ರಮ ಕೈಗೊಳ್ಳುತ್ತದೆ. ಆಡಳಿತದ ದಕ್ಷತೆ ಅದರ ಶುದ್ಧತೆಯಿಂದ ಬರುತ್ತದೆ. ವಿವಿಧ ಮಾನದಂಡಗಳು, ವಿವಿಧ ಕ್ಷೇತ್ರಗಳಿಗೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ ಗೌರವಿಸುವ ಚಿಂತನೆ ಇದೆ. ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags