Dailyhunt
ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇನ್ನು 'ಶೈಕ್ಷಣಿಕ ಸಂಯೋಜಕರು': ಸಚಿವ ಎಂ.ಸಿ. ಸುಧಾಕರ್ ಘೋಷಣೆ

ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇನ್ನು 'ಶೈಕ್ಷಣಿಕ ಸಂಯೋಜಕರು': ಸಚಿವ ಎಂ.ಸಿ. ಸುಧಾಕರ್ ಘೋಷಣೆ

Kannada News Now 2 weeks ago

ಬೆಂಗಳೂರು: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಯುಜಿಸಿ (UGC) ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂತಹ 3,853 ಉಪನ್ಯಾಸಕರನ್ನು ಮಾನವೀಯ ನೆಲೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ 'ಶೈಕ್ಷಣಿಕ ಸಂಯೋಜಕರು' ಆಗಿ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.

ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಯುಜಿಸಿ ಅರ್ಹತೆ ಇಲ್ಲದಿದ್ದರೂ, ಕನಿಷ್ಠ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ 3,853 ಅತಿಥಿ ಉಪನ್ಯಾಸಕರಿಗೆ ಈ ಆದೇಶ ಅನ್ವಯವಾಗಲಿದೆ.ಇವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಕಾನೂನು ಪ್ರಕಾರ ಯುಜಿಸಿ ಅರ್ಹತೆ ಇಲ್ಲದವರನ್ನು ಅತಿಥಿ ಉಪನ್ಯಾಸಕ ಸೇವೆಯಿಂದ ತೆಗೆಯಬೇಕಾಗುತ್ತದೆ. ಆದರೆ, ಅವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಮಾನವೀಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಇವರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ.

ರಾಜ್ಯದಲ್ಲಿ ಒಟ್ಟು 10,335 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 5,267 ಮಂದಿ ಮಾತ್ರ ಯುಜಿಸಿ ನಿಗದಿತ ಅರ್ಹತೆ ಹೊಂದಿದ್ದಾರೆ. ಉಳಿದ 5,068 ಮಂದಿಯಲ್ಲಿ 1,215 ಜನರನ್ನು ಕೌನ್ಸೆಲಿಂಗ್ ಮೂಲಕ ಅತಿಥಿ ಉಪನ್ಯಾಸಕರಾಗಿ ಮುಂದುವರಿಸಲಾಗಿದ್ದು, ಉಳಿದ 3,853 ಜನರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ ಬದಲಾಯಿಸಲಾಗಿದೆ. ಶೈಕ್ಷಣಿಕ ಸಂಯೋಜಕರ ನೇಮಕಾತಿಗಾಗಿ ವಾರ್ಷಿಕವಾಗಿ ₹98.08 ಕೋಟಿ ಅನುದಾನದ ಅಗತ್ಯವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now