ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಶಾಲಾ ಅವಧಿಯಲ್ಲಿ ಬೋಧನೆಗೆ ಯಾವುದೇ ಅಡ್ಡಿಯಾಗದಂತೆ ತಡೆಯಲು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಕಠಿಣ ಸುತ್ತೋಲೆಯನ್ನು ಹೊರಡಿಸಿದೆ.
ಶಾಲಾ ಸಮಯದಲ್ಲಿ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಕಡ್ಡಾಯವಾಗಿ ಶಾಲೆಯಲ್ಲೇ ಹಾಜರಿದ್ದು ಬೋಧನೆ ಮಾಡಬೇಕು ಎಂದು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಹೊಸ ಮಾರ್ಗಸೂಚಿ
ತರಬೇತಿ ಮತ್ತು ಸಭೆಗಳಿಗೆ ನಿಷೇಧ: ಶಾಲಾ ದಿನಗಳಲ್ಲಿ ಮತ್ತು ಶಾಲಾ ಅವಧಿಯಲ್ಲಿ ಯಾವುದೇ ಶಿಕ್ಷಕರನ್ನು ಅಥವಾ ಮುಖ್ಯೋಪಾಧ್ಯಾಯರನ್ನು ಯಾವುದೇ ರೀತಿಯ ತರಬೇತಿ ಕಾರ್ಯಕ್ರಮ, ಕಾರ್ಯಾಗಾರ ಅಥವಾ ಸಭೆಗಳಿಗೆ ನಿಯೋಜಿಸುವಂತಿಲ್ಲ. ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕ ಇವರನ್ನು ಕಳುಹಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗಳಿಗೂ ಇಂತಹ ಆದೇಶ ನೀಡದಂತೆ ಸೂಚಿಸಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಇಲ್ಲ: ಶಾಲಾ ಸಮಯದಲ್ಲಿ ಶಿಕ್ಷಕರು ಅಥವಾ ಮುಖ್ಯೋಪಾಧ್ಯಾಯರ ಯಾವುದೇ ಸಭೆ ಅಥವಾ ವಿಡಿಯೋ ಕಾನ್ಫರೆನ್ಸ್ (Video Conference) ನಡೆಸುವಂತಿಲ್ಲ. ಶಾಲೆಗೆ ಭೇಟಿ ನೀಡುವ ಅಧಿಕಾರಿಗಳು ತರಗತಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.
ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ಯುವಂತಿಲ್ಲ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಹೊರಗಡೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಭಾಗವಹಿಸಲು ಅಥವಾ ಕರೆದುಕೊಂಡು ಹೋಗಲು ನಿರ್ದೇಶಿಸುವಂತಿಲ್ಲ.
ಬಾಹ್ಯ ಪರೀಕ್ಷೆಗಳಿಗೆ ನಿರ್ಬಂಧ: ಶಾಲಾ ದಿನಗಳಲ್ಲಿ ಕೆಪಿಎಸ್ಸಿ (KPSC) ಅಥವಾ ಇತರ ಯಾವುದೇ ರಾಜ್ಯ/ಕೇಂದ್ರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಡೆಸುವ ಬಾಹ್ಯ ಪರೀಕ್ಷೆಗಳನ್ನು ಶಾಲಾ ಆವರಣದಲ್ಲಿ ನಡೆಸಬಾರದು. ಒಂದು ವೇಳೆ ಇಂತಹ ಪರೀಕ್ಷೆಗಳಿಗೆ ಅವಕಾಶ ನೀಡಬೇಕಾದಲ್ಲಿ, ಕೇವಲ ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ದಿನಗಳಲ್ಲಿ ಮಾತ್ರ ನಿಯಮಾನುಸಾರ ಅವಕಾಶ ನೀಡಬಹುದು. ಇದನ್ನು ಉಲ್ಲಂಘಿಸಿದರೆ DDPI, BEO ಮತ್ತು ಡಯಟ್ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ.
ಡೇಟಾ ಎಂಟ್ರಿ ಕೆಲಸಕ್ಕೆ ಶಿಕ್ಷಕರನ್ನು ಬಳಸುವಂತಿಲ್ಲ: ಖಾಸಗಿ ಸಂಸ್ಥೆಗಳ ಅಥವಾ ಯಾವುದೇ ಜ್ಞಾನ ಪಾಲುದಾರರ ಸಾಫ್ಟ್ವೇರ್ಗಳಲ್ಲಿ ಡೇಟಾ ಎಂಟ್ರಿ ಮಾಡುವಂತಹ ಕೆಲಸಗಳಿಗೆ ಶಿಕ್ಷಕರನ್ನು ಅಥವಾ ಮುಖ್ಯೋಪಾಧ್ಯಾಯರನ್ನು ಬಳಸಿಕೊಳ್ಳುವಂತಿಲ್ಲ. ಇಂತಹ ಆದೇಶ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಈ ಎಲ್ಲಾ ಕಠಿಣ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲಾಖೆಯು ಆದೇಶಿಸಿದೆ. ಇದರಿಂದಾಗಿ ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಓದಿಗೆ ಹೆಚ್ಚಿನ ಸಮಯ ಸಿಗಲಿದ್ದು, ಶಿಕ್ಷಣದ ಗುಣಮಟ್ಟ ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

