ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದ ದೇಣಿಗೆ ಹಣ ಕಳ್ಳತನದ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ದಿನಕ್ಕೊಂದು ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಪ್ರಕರಣದ ಮುಖ್ಯ ಆರೋಪಿಯಾಗಿರುವ ಅವಿನಾಶ್ ಶುಕ್ಲಾ ಎಂಬಾತ ಸುಮಾರು 15 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ರಹಸ್ಯ ಆರ್ಥಿಕ ವಹಿವಾಟು ನಡೆಸಿರುವುದು ತನಿಖಾಧಿಕಾರಿಗಳ ಕೈಗೆ ಸಿಕ್ಕಿರುವ ಹೊಸ ಆಧಾರಗಳಿಂದ ಸಾಬೀತಾಗಿದೆ.
ಈ ಬೃಹತ್ ಮೊತ್ತದ ವಹಿವಾಟುಗಳು ಮಂದಿರದ ಭಕ್ತರು ನೀಡಿದ್ದ ಕಾಣಿಕೆ ಹಣ ಕಳವಿಗೆ ನೇರವಾಗಿ ಸಂಬಂಧಿಸಿವೆಯೇ ಎಂಬ ಆಯಾಮದಲ್ಲಿ ಅಯೋಧ್ಯೆ ಪೊಲೀಸರು ಈಗ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ನಡುವೆ, ಆರೋಪಿ ಅವಿನಾಶ್ ತನ್ನ ಗೆಳತಿಗೆ ಸರಿಸುಮಾರು 2 ಲಕ್ಷ ರೂಪಾಯಿ ನಗದು ಹಣ ಹಾಗೂ ಅತ್ಯಂತ ದುಬಾರಿ ಮೊಬೈಲ್ ಫೋನ್ ಒಂದನ್ನು ಉಡುಗೊರೆಯಾಗಿ ನೀಡಿದ್ದ ಎಂಬ ವಿಷಯವೂ ಬೆಳಕಿಗೆ ಬಂದಿದ್ದು, ಈ ಹಣದ ಮೂಲ ಯಾವುದು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದಾರೆ.
ಆರೋಪಿಯ ಸಹೋದರ ಅಭಿಷೇಕ್ ಪೊಲೀಸರಿಗೆ ನೀಡಿರುವ ಹೇಳಿಕೆಯು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಅವಿನಾಶ್ ದಿನನಿತ್ಯ ಮಂದಿರದ ಕೆಲಸ ಮುಗಿದ ನಂತರ ಭಾರೀ ಪ್ರಮಾಣದ ನಗದು ಹಣವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಯೋಗ ಕೇಂದ್ರವೊಂದಕ್ಕೆ ಹೋಗುತ್ತಿರುವುದನ್ನು ತಾನು ಹಲವು ಬಾರಿ ನೋಡಿರುವುದಾಗಿ ಆತನ ಸಹೋದರ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಪ್ರಶ್ನಿಸಿದಾಗ ಅವಿನಾಶ್ ಸರಿಯಾದ ಉತ್ತರ ನೀಡದೆ ಮೌನ ವಹಿಸುತ್ತಿದ್ದ ನೆನ್ನಲಾಗಿದೆ. ಇದೇ ವಿಷಯವಾಗಿ ಅವಿನಾಶ್ ಆಪ್ತ ಅನುಕಲ್ಪ್ ಎಂಬಾತನನ್ನು ವಿಚಾರಿಸಿದಾಗ, ಭಕ್ತರು ಮಂದಿರದಲ್ಲಿ ದರ್ಶನ ಪಡೆಯಲು ಸಹಾಯ ಮಾಡಿದ್ದಕ್ಕಾಗಿ ಕೃತಜ್ಞತೆಯಿಂದ ಅವಿನಾಶ್‌ಗೆ ಹಣ ನೀಡುತ್ತಿದ್ದರು ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾನೆ, ಅಲ್ಲದೆ ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಯ ಎಲ್ಲಾ ನಗದು ವ್ಯವಹಾರಗಳು, ಬ್ಯಾಂಕ್ ಖಾತೆಗಳು ಮತ್ತು ಆತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಜಾಲದ ಮೇಲೆ ಕಣ್ಣಿಟ್ಟಿದ್ದಾರೆ.
ಈ ಭಾರಿ ಹಗರಣದಿಂದ ಎಚ್ಚೆತ್ತುಕೊಂಡಿರುವ ರಾಮ ಮಂದಿರ ಟ್ರಸ್ಟ್, ದೇಣಿಗೆ ಎಣಿಕೆ ಮಾಡುವ ಕೊಠಡಿಯಲ್ಲಿ ಅತ್ಯಂತ ಕಠಿಣವಾದ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಹಣ ಎಣಿಸುವ ಸಿಬ್ಬಂದಿಗಳು ಕುರ್ಚಿ-ಮೇಜುಗಳನ್ನು ಬಳಸುವಂತಿಲ್ಲ, ಬದಲಿಗೆ ನೆಲದ ಮೇಲೆ ಹಾಸಿಗೆ ಮತ್ತು ಪ್ಲೈವುಡ್ ಶೀಟ್‌ಗಳನ್ನು ಹಾಕಿ ಅದರ ಮೇಲೆಯೇ ಕುಳಿತು ಪಾರದರ್ಶಕವಾಗಿ ಹಣ ಎಣಿಸಬೇಕು ಎಂದು ಆದೇಶಿಸಲಾಗಿದೆ.
ಹಣ ಎಣಿಕೆ ಪ್ರಕ್ರಿಯೆ ನಡೆಯುವಾಗ ಸಿಬ್ಬಂದಿಗಳು ಪರಸ್ಪರ ಮಾತನಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪದೇ ಪದೇ ಶೌಚಾಲಯಕ್ಕೆ ಹೋಗುವ ನೌಕರರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದ್ದು, ಕ್ಯಾಂಟೀನ್‌ನಲ್ಲಿ ಹೆಚ್ಚು ಸಮಯ ಕಳೆಯುವುದಕ್ಕೂ ಬ್ರೇಕ್ ಹಾಕಲಾಗಿದೆ. ಇಡೀ ಕೊಠಡಿಯನ್ನು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಮಾನಿಟರಿಂಗ್ ರೂಮ್‌ನಲ್ಲಿರುವ ಭದ್ರತಾ ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ತಮ್ಮ ಆಸನದಿಂದ ಎದ್ದು ಹೋಗುವಂತಿಲ್ಲ ಎಂದು ಟ್ರಸ್ಟ್ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

