ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ (ADA) ಗ್ರೂಪ್ ಕಂಪನಿಗಳಿಗೆ ಲಿಂಕ್ ಆಗಿರುವ ಕೋಟ್ಯಂತರ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕ್ಯಾಪಿಟಲ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (CFO) ಅಮಿತ್ ಬಾಪ್ನಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಆಗಸ್ಟ್ 2014 ರಿಂದ ಡಿಸೆಂಬರ್ 2019 ರವರೆಗೆ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಸಿಎಫ್‌ಒ ಆಗಿ ಕಾರ್ಯನಿರ್ವಹಿಸಿದ್ದ ಬಾಪ್ನಾ, ಕಂಪನಿಯ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಅಧಿಕಾರಿಯಾಗಿದ್ದರು. ರಿಲಯನ್ಸ್ ಎಡಿಎ ಗ್ರೂಪ್‌ಗೆ ಸಂಬಂಧಿಸಿದ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಸಿಬಿಐನಿಂದ ಬಂಧನಕ್ಕೊಳಗಾದ ಆರನೇ ಆರೋಪಿ ಬಾಪ್ನಾ ಆಗಿದ್ದಾರೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್‌ಗೆ (RCFL) ಸೇರಿದ ಬ್ಯಾಂಕ್ ಸಾಲ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಈ ವರ್ಷದ ಏಪ್ರಿಲ್‌ನಲ್ಲಿ ಬಂಧನಕ್ಕೊಳಗಾಗಿದ್ದ ಅಮಿತ್ ಬಾಪ್ನಾ ಸದ್ಯ ದೆಹಲಿಯ ತಿಹಾರ್ ಕೇಂದ್ರ ಕಾರಾಗೃಹದಲ್ಲಿದ್ದರು. ಸಿಬಿಐ ಅಧಿಕಾರಿಗಳು ಮುಂಬೈ ನ್ಯಾಯಾಲಯದಿಂದ ಪ್ರೊಡಕ್ಷನ್ ವಾರಂಟ್ ಪಡೆದು ಬಾಪ್ನಾ ಅವರನ್ನು ತಿಹಾರ್ ಜೈಲಿನಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇವರನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನಾಲ್ಕು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಪಡೆದ ಸಾಲದ ಹಣವನ್ನು ಆರ್‌ಬಿಐ ಮಾರ್ಗಸೂಚಿಗಳು ಮತ್ತು ಸಾಲ ಮಂಜೂರಾತಿ ನಿಯಮಗಳಿಗೆ ವಿರುದ್ಧವಾಗಿ ಮಧ್ಯವರ್ತಿ ಕಂಪನಿಗಳಿಗೆ ವರ್ಗಾಯಿಸಲು ಅಮಿತ್ ಬಾಪ್ನಾ ಅನುಮೋದನೆ ನೀಡಿದ್ದರು ಎಂದು ಸಿಬಿಐ ಗಂಭೀರ ಆರೋಪ ಮಾಡಿದೆ.
ಆರ್‌ಸಿಎಫ್‌ಎಲ್ ಸಂಸ್ಥೆಯು ಬ್ಯಾಂಕುಗಳಿಂದ ಪಡೆದ ಕೋಟ್ಯಂತರ ರೂಪಾಯಿ ಹಣವನ್ನು ಮಧ್ಯವರ್ತಿ ಸಂಸ್ಥೆಗಳ ಮೂಲಕ ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಪವರ್ ಸೇರಿದಂತೆ ವಿವಿಧ ರಿಲಯನ್ಸ್ ಎಡಿಎ ಗ್ರೂಪ್ ಕಂಪನಿಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಇದರಿಂದ ಸಾಲ ನೀಡಿದ ಬ್ಯಾಂಕುಗಳಿಗೆ ಭಾರಿ ನಷ್ಟವುಂಟಾಗಿದ್ದು, ಆರೋಪಿಗಳು ಕಾನೂನುಬಾಹಿರ ಲಾಭ ಗಳಿಸಿದ್ದಾರೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಧ ಬ್ಯಾಂಕುಗಳು ಮತ್ತು ಎಲ್‌ಐಸಿ ನೀಡಿದ ದೂರಿನ ಆಧಾರದ ಮೇಲೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) ಸೇರಿದಂತೆ ಗ್ರೂಪ್‌ನ ವಿವಿಧ ಸಂಸ್ಥೆಗಳ ವಿರುದ್ಧ ಸಿಬಿಐ ಈಗಾಗಲೇ ಏಳು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಪ್ರಗತಿಯಲ್ಲಿದೆ.

