ಶ್ರೀನಗರ: ಸಾಮಾನ್ಯವಾಗಿ 17 ವರ್ಷದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳು, ಕಾಲೇಜು ಪ್ರವೇಶಾತಿಗಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಗಡಿ ಗ್ರಾಮದ ವಿದ್ಯಾರ್ಥಿಯೊಬ್ಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ ಆರೇ ತಿಂಗಳಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಹೆಚ್ವು ಪ್ರಸಿದ್ಧ ಎಡ್‌ಟೆಕ್ (EdTech) ಸ್ಟಾರ್ಟ್‌ಅಪ್ ಕಂಪನಿಯನ್ನು ಕಟ್ಟಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಎಲ್‌ಒಸಿ (LoC) ಬಳಿಯ ದೂಂಗಿ ಎಂಬ ಸಣ್ಣ ಹಳ್ಳಿಯ 17 ವರ್ಷದ ಇಮ್ರಾನ್ ಚೌಧರಿ (Imran Chaudhary) ಈ ಅಭೂತಪೂರ್ವ ಸಾಧನೆ ಮಾಡಿದ ಯುವ ಉದ್ಯಮಿ. ಪ್ರಸ್ತುತ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಮ್ರಾನ್, 'ಲ್ಯಾಗ್‌ನೆವರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್' (Lagnever Technologies Private Limited) ಎಂಬ ಎಐ ಆಧಾರಿತ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯ ಸಂಸ್ಥಾಪಕನಾಗಿದ್ದಾನೆ.
10,000ಕ್ಕೂ ಹೆಚ್ಚು ಡೌನ್‌ಲೋಡ್ಸ್:
ವಿದ್ಯಾರ್ಥಿಗಳಿಗೆ ಕಲಿಯುವಿಕೆಯನ್ನು ಹೆಚ್ಚು ಸುಲಭ ಮತ್ತು ವೈಯಕ್ತೀಕರಿಸಿದ (Personalised) ಮಾದರಿಯಲ್ಲಿ ತಲುಪಿಸಲು ಇಮ್ರಾನ್ ಈ ವೇದಿಕೆಯನ್ನು ಸಿದ್ಧಪಡಿಸಿದ್ದಾನೆ. ಕಂಪನಿಯ ಪ್ರಮುಖ ಉತ್ಪನ್ನವಾದ 'ಲ್ಯಾಗ್‌ನೆವರ್ ಎಐ' (Lagnever AI) ಆಪ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 10,000ಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ದಾಟಿದ್ದು, ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಈ ಆಪ್ ಶಿಕ್ಷಕರಿಗೆ ಪರ್ಯಾಯವಲ್ಲ, ಬದಲಿಗೆ ತರಗತಿಯ ಕಲಿಕೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಎಐ ಸ್ಟಡಿ ಅಸಿಸ್ಟೆನ್ಸ್, ಆಟೋಮ್ಯಾಟಿಕ್ ನೋಟ್ಸ್ ಮೇಕಿಂಗ್, ರಸಪ್ರಶ್ನೆಗಳು (Quizzes), ಗೊಂದಲ ನಿವಾರಣೆ (Doubt-solving) ಮತ್ತು ವೃತ್ತಿ ಮಾರ್ಗದರ್ಶನ (Career Guidance) ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್‌ಗಳಿವೆ. ಪ್ರೀಮಿಯಂ ಶಿಕ್ಷಣ ಸಂಪನ್ಮೂಲಗಳನ್ನು ಪಡೆಯಲು ಸಾಧ್ಯವಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇಮ್ರಾನ್‌ನ ಮುಖ್ಯ ಉದ್ದೇಶವಾಗಿದೆ.
12 ಜನರ ತಂಡ ಹಾಗೂ ಹೂಡಿಕೆದಾರರ ಒಲವು:
ಗಡಿ ಭಾಗದ ಅತ್ಯಂತ ಕಡಿಮೆ ಸೌಲಭ್ಯಗಳಿರುವ ಹಳ್ಳಿಯಲ್ಲಿ ಬೆಳೆದರೂ ಇಮ್ರಾನ್‌ಗೆ ತಂತ್ರಜ್ಞಾನದ ಮೇಲಿದ್ದ ಆಸಕ್ತಿ ಕಡಿಮೆ ಆಗಲಿಲ್ಲ. ಸ್ವಯಂ ಕಲಿಕೆಯ (Self-learning) ಮೂಲಕ ತಂತ್ರಜ್ಞಾನ ಮೈಗೂಡಿಸಿಕೊಂಡ ಆತ, ಸದ್ಯ 12 ಸದಸ್ಯರ ಬಲಿಷ್ಠ ತಂಡದೊಂದಿಗೆ ಈ ಸ್ಟಾರ್ಟ್‌ಅಪ್ ಮುನ್ನಡೆಸುತ್ತಿದ್ದಾನೆ. ಕಂಪನಿಯ ಅದ್ಭುತ ಬೆಳವಣಿಗೆಯನ್ನು ಕಂಡು ದೇಶ-ವಿದೇಶಗಳ ಹಲವು ಪ್ರಮುಖ ಹೂಡಿಕೆದಾರರು ಇಮ್ರಾನ್ ಕಂಪನಿಯಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ.
ಜಾಗತಿಕ ಮನ್ನಣೆ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್:
ಇಮ್ರಾನ್ ಸಾಧನೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಜಾಗತಿಕ ಮಟ್ಟದಲ್ಲೂ ಈತನಿಗೆ ಮನ್ನಣೆ ಸಿಕ್ಕಿದೆ. ವಿಶ್ವಪ್ರಸಿದ್ಧ 'ಬ್ಲ್ಯಾಕ್‌ರಾಕ್' (BlackRock) ಸಂಸ್ಥೆಗೆ ಒಳಪಟ್ಟ ಪ್ರತಿಷ್ಠಿತ ಜಾಗತಿಕ ಸಂಸ್ಥಾಪಕರ ಕಾರ್ಯಕ್ರಮಕ್ಕೆ (Global Founders' Programme) ಈತ ಆಯ್ಕೆಯಾಗಿದ್ದಾನೆ. ವಿಶ್ವದಾದ್ಯಂತ ಕೇವಲ 60 ಯುವ ಉದ್ಯಮಿಗಳನ್ನು ಮಾತ್ರ ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಇಮ್ರಾನ್ ಒಬ್ಬನಾಗಿರುವುದು ಹೆಮ್ಮೆಯ ವಿಷಯ. ಇದರೊಂದಿಗೆ ಈತನ ಸಾಧನೆ 'ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ಸ್'ನಲ್ಲೂ ದಾಖಲಾಗಿದೆ.
ಶಿಕ್ಷಣ ಮತ್ತು ಉದ್ಯಮದ ಸಮತೋಲನ:
ಓದಿನ ಜೊತೆಗೇ ಉದ್ಯಮವನ್ನು ಬೆಳೆಸುವುದು ಇಮ್ರಾನ್‌ಗೆ ಸುಲಭದ ಮಾತಾಗಿರಲಿಲ್ಲ. ಅಪ್ಲಿಕೇಶನ್ ಅಭಿವೃದ್ಧಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಟ್ಟ ಕಾರಣ ಆತ 11ನೇ ತರಗತಿಯಲ್ಲಿ ಶೇ. 89 ರಷ್ಟು ಅಂಕಗಳನ್ನು ಗಳಿಸಿದ್ದಾನೆ. ಈಗ ನಡೆಯಲಿರುವ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲೂ ಅಷ್ಟೇ ಅಂಕಗಳನ್ನು ನಿರೀಕ್ಷಿಸುತ್ತಿದ್ದಾನೆ.
"ಇದಕ್ಕಾಗಿ ನನಗೇನು ವಿಷಾದವಿಲ್ಲ. ನಾನು ಮುಂದೆ ಯಾವ ಕ್ಷೇತ್ರವನ್ನು ಆಯ್ದುಕೊಳ್ಳಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿ ವೃತ್ತಿಜೀವನವನ್ನು ಆರಂಭಿಸಿದ್ದೇನೆ. ಅಕಾಡೆಮಿಕ್ಸ್ ಮುಖ್ಯ ಹೌದು, ಆದರೆ ಉದ್ಯಮಶೀಲತೆಯ ಮೂಲಕ ನಾನು ಕಲಿತ ಪ್ರಾಯೋಗಿಕ ಕೌಶಲ್ಯಗಳು ನನ್ನ ಭವಿಷ್ಯವನ್ನು ರೂಪಿಸುತ್ತಿವೆ," ಎಂದು ಇಮ್ರಾನ್ ವಿಶ್ವಾಸದಿಂದ ಹೇಳುತ್ತಾನೆ.
ಗಡಿಯ ಒಂದು ಸಣ್ಣ ಹಳ್ಳಿಯಿಂದ ಜಾಗತಿಕ ಮಟ್ಟದ ಎಐ ಸ್ಟಾರ್ಟ್‌ಅಪ್ ಬೆಳೆಸಿದ ಇಮ್ರಾನ್ ಚೌಧರಿಯ ಯಶೋಗಾಥೆ, ಇಂದಿನ ಭಾರತದ ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದೆ.

