ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದ್ದು, ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಮಳೆಬಾಧಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕತ್ತಲೆ ಬಜಾರಿನ ಜೆ.ಪಿ.
ನಗರದ ನಿವಾಸಿ ಕರೀಂ ಸಾಬ್ ಎಂಬುವವರ ಮನೆ ಭಾರಿ ಮಳೆಗೆ ಜಖಂಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ನಿಯಮಾನುಸಾರ ಶೀಘ್ರದಲ್ಲೇ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.
ಅಲರ್ಟ್ ಆದ ಕಂದಾಯ ಇಲಾಖೆ
ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿಯೇ ಇರಬೇಕು ಎಂದು ತಹಶೀಲ್ದಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸದ್ಯ ಅಧಿಕಾರಿಗಳ ತಂಡವು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸುತ್ತಿದ್ದು, ತಕ್ಷಣದ ಪರಿಹಾರ ಕಾರ್ಯಗಳಿಗೆ ಚಾಲನೆ ನೀಡಿದೆ.
24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಆರಂಭ
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರ ನೆರವಿಗಾಗಿ ತಾಲ್ಲೂಕು ಆಡಳಿತವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶೇಷ ನಿಯಂತ್ರಣ ಕೊಠಡಿಯನ್ನು (Control Room) ತೆರೆದಿದೆ.
ಮಳೆ ಅಥವಾ ಪ್ರಕೃತಿ ವಿಪತ್ತಿನಿಂದ ಯಾವುದೇ ರೀತಿಯ ತೊಂದರೆ ಎದುರಾದರೆ ಸಾರ್ವಜನಿಕರು ತಕ್ಷಣವೇ ತಾಲ್ಲೂಕು ಕಚೇರಿಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.
ದೂರವಾಣಿ ಸಂಖ್ಯೆ:08183-226074
ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ತಡೆಗಟ್ಟಲು ಮತ್ತು ಸಂತ್ರಸ್ತರಿಗೆ ತಕ್ಷಣ ನೆರವು ನೀಡಲು ಆಡಳಿತ ಯಂತ್ರ ಸನ್ನದ್ಧವಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ, ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಯ ಸಂಖ್ಯೆಯನ್ನು ಸಂಪರ್ಕಿಸಿ ನೆರವು ಪಡೆಯಬಹುದು" ಎಂದು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

