Dailyhunt Logo
  • Light mode
    Follow system
    Dark mode
    • Play Story
    • App Story
ಸಾಗರದಲ್ಲಿ 'ಟಾಕ್ಸಿಕ್' ಚಿತ್ರದ ವಿರುದ್ಧ ಕರವೇ ನಾರಾಯಣ ಗೌಡ ಬಣ ಪ್ರತಿಭಟನೆ

ಸಾಗರದಲ್ಲಿ 'ಟಾಕ್ಸಿಕ್' ಚಿತ್ರದ ವಿರುದ್ಧ ಕರವೇ ನಾರಾಯಣ ಗೌಡ ಬಣ ಪ್ರತಿಭಟನೆ

Kannada News Now 1 week ago

ಶಿವಮೊಗ್ಗ : ಜಿಲ್ಲೆಯ ಸಾಗರ ನಗರದ 'ಶ್ರೀ ಟಾಕೀಸ್' ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ 'ಟಾಕ್ಸಿಕ್' ಚಲನಚಿತ್ರದಲ್ಲಿರುವ ಅತಿಯಾದ ಅಶ್ಲೀಲ ದೃಶ್ಯಗಳನ್ನು ಕತ್ತರಿಸಿ (ಕಟ್ ಮಾಡಿ) ಪ್ರದರ್ಶಿಸಬೇಕು, ಇಲ್ಲವೇ ಚಿತ್ರ ಪ್ರದರ್ಶನವನ್ನೇ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಸಾಗರ ತಾಲೂಕು ಘಟಕದ ಅಧ್ಯಕ್ಷ ಮನೋಜ್ ಕುಗ್ವೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆಕ್ಷೇಪಾರ್ಹ ದೃಶ್ಯ ಕತ್ತರಿಗೆ ಮನೋಜ್ ಕುಗ್ವೆ ಆಗ್ರಹ

ಈ ವೇಳೆ ಮಾತನಾಡಿದಂತ ಅವರು, "ಸಾಗರವು ಅತ್ಯುತ್ತಮ ಸಂಸ್ಕೃತಿ ಮತ್ತು ಹೋರಾಟದ ಪರಂಪರೆ ಹೊಂದಿರುವ ನೆಲ. ಕೆಜಿಎಫ್‌ನಂತಹ ಸಿನಿಮಾಗಳ ಮೂಲಕ ಇಡೀ ಕುಟುಂಬವೇ ಕುಳಿತು ನೋಡುವಂತಹ ಚಿತ್ರಗಳನ್ನು ನೀಡಿದ್ದ ಯಶ್ ಅವರ ಮೇಲೆ ಜನರಿಗೆ ಅಪಾರ ನಿರೀಕ್ಷೆ ಇತ್ತು. ಆದರೆ 'ಟಾಕ್ಸಿಕ್' ಚಿತ್ರದಲ್ಲಿ ಮಿತಿಮೀರಿದ ಅಶ್ಲೀಲ ದೃಶ್ಯಗಳು, ಕೆಟ್ಟ ಪದಬಳಕೆ, ಅವಾಚ್ಯ ಶಬ್ದಗಳು ಹಾಗೂ ಕುಟುಂಬ ಸಮೇತರಾಗಿ ನೋಡಲು ಮುಜುಗರವಾಗುವಂತಹ ಪ್ರದರ್ಶನಗಳಿವೆ. ಇದು ಸಮಾಜದ ಯುವಜನತೆಯನ್ನು ತಪ್ಪು ದಾರಿಗೆಳೆಯುತ್ತದೆ ಎಂದು ಗುಡುಗಿದರು.

ಚಿತ್ರಮಂದಿರದ ಮಾಲೀಕರು ತಕ್ಷಣವೇ ಈ ಅಶ್ಲೀಲ ಹಾಗೂ ಆಕ್ಷೇಪಾರ್ಹ ದೃಶ್ಯಗಳನ್ನು ಕಟ್ ಮಾಡಿ ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಚಿತ್ರಮಂದಿರಕ್ಕೆ ಬೀಗ ಜಡಿದು ಉಗ್ರ ಹೋರಾಟ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದರು.

ಕರವೇ ಕಾರ್ಯಕರ್ತ, ಪತ್ರಕರ್ತ ಮೂರನೇಕಣ್ಣು ನಾಗರಾಜ್ ಕಿಡಿ

ಬಳಿಕ ಮಾತನಾಡಿದ ಕರವೇ ಕಾರ್ಯಕರ್ತ ಹಾಗೂ ಪತ್ರಕರ್ತ ಮೂರನೇಕಣ್ಣು ನಾಗರಾಜ್, ಸಾಗರ ನಗರದಲ್ಲಿ ಇರುವುದೇ ಒಂದೇ ಒಂದು ಚಿತ್ರಮಂದಿರ. ಇಂತಹ ಊರಿನಲ್ಲಿ ಕುಟುಂಬ ಸಮೇತರಾಗಿ, ತಂದೆ-ಮಗಳು, ಅಣ್ಣ-ತಂಗಿ ಜೊತೆಯಾಗಿ ನೋಡಲು ಸಾಧ್ಯವಾಗದ ಅಶ್ಲೀಲ ಸಿನಿಮಾವನ್ನು ಪ್ರದರ್ಶಿಸುತ್ತಿರುವುದು ದುರದೃಷ್ಟಕರ ಎಂದರು.

ನಿರ್ಮಾಪಕರು ಲಾಭದ ಉದ್ದೇಶದಿಂದ ಇಂತಹ ಕಂಟೆಂಟ್ ಸೃಷ್ಟಿಸುತ್ತಿದ್ದು, ಸೆನ್ಸಾರ್ ಮಂಡಳಿ ಏನು ಮಾಡುತ್ತಿದೆ ಎಂಬುದು ಪ್ರಶ್ನೆಯಾಗಿದೆ. ನಟರ ಅಭಿನಯಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಸಮಾಜದ ಸ್ವಾಸ್ಥ್ಯ ಕೆಡಿಸುವ ದೃಶ್ಯಗಳನ್ನು ನಾವು ಒಪ್ಪುವುದಿಲ್ಲ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕದಿದ್ದರೆ ಉಪವಿಭಾಗಾಧಿಕಾರಿಗಳಿಗೆ (AC) ದೂರು ನೀಡಿ, ಮುಂದಿನ ದಿನಗಳಲ್ಲಿ ಚಿತ್ರ ಪ್ರದರ್ಶನ ತಡೆಯಲು ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು" ಎಂದು ಹೇಳಿದರು.

ಸಾಗರದ ಎಸಿಗೆ ಕರವೇ ಮನವಿ, ಅದರಲ್ಲಿ ಏನಿದೆ ಗೊತ್ತಾ?

ಸಾಗರ ನಗರವು ಸಾಂಸ್ಕೃತಿಕ ಹಾಗೂ ಗೌರವಾನ್ವಿತ ಜನಜೀವನಕ್ಕೆ ಹೆಸರಾಗಿದೆ. ಪ್ರಸ್ತುತ ಪ್ರದರ್ಶನಗೊಳ್ಳುತ್ತಿರುವ 'ಟಾಕ್ಸಿಕ್' ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳಿಗೆ ಧಕ್ಕೆ ತರುವಂತಹ ಅತಿಯಾದ ಅಶ್ಲೀಲ ದೃಶ್ಯಗಳಿವೆ ಎಂಬುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಕುಟುಂಬ ಸಮೇತರಾಗಿ, ವಿಶೇಷವಾಗಿ ತಂದೆ-ಮಕ್ಕಳು ಹಾಗೂ ಮಹಿಳೆಯರೊಂದಿಗೆ ಸಿನಿಮಾ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಈ ದೃಶ್ಯಗಳಿಂದ ತೀವ್ರ ಮುಜುಗರ ಉಂಟಾಗುತ್ತಿದೆ.

ಸಾರ್ವಜನಿಕರ ಗೌರವ ಮತ್ತು ಕೌಟುಂಬಿಕ ವಾತಾವರಣವನ್ನು ಕಾಪಾಡುವ ಹಿತದೃಷ್ಟಿಯಿಂದ ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ಕೂಡಲೇ ತೆಗೆದುಹಾಕಿ ಪ್ರದರ್ಶಿಸಬೇಕು. ಒಂದು ವೇಳೆ ಆ ದೃಶ್ಯಗಳನ್ನು ತೆಗೆಯದೆ ಹಾಗೆಯೇ ಪ್ರದರ್ಶನ ಮುಂದುವರಿಸಿದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಚಿತ್ರಮಂದಿರದ ಮುಂದೆ ತೀವ್ರ ಪ್ರತಿಭಟನೆ ನಡೆಸಿ ಚಿತ್ರ ಪ್ರದರ್ಶನವನ್ನು ತಡೆಯಬೇಕಾಗುತ್ತದೆ ಎಂದಿದೆ.

ಈ ಸಂದರ್ಭದಲ್ಲಿ ಕರವೇ ಸಾಗರ ತಾಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ವಿವಿಧ ಕನ್ನಡ ಪ್ರೇಮಿಗಳಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Kannada News Now