Dailyhunt Logo
  • Light mode
    Follow system
    Dark mode
    • Play Story
    • App Story
ಸಾಹಿತಿಗಳ ಶ್ರೇಷ್ಠ ಬರಹಗಳೆಲ್ಲವೂ ಕನ್ನಡ ಸಾಹಿತ್ಯ ಲೋಕದ ಆಸ್ತಿ: ಡಾ. ನಟರಾಜ್ ಹುಳಿಯಾರ್

ಸಾಹಿತಿಗಳ ಶ್ರೇಷ್ಠ ಬರಹಗಳೆಲ್ಲವೂ ಕನ್ನಡ ಸಾಹಿತ್ಯ ಲೋಕದ ಆಸ್ತಿ: ಡಾ. ನಟರಾಜ್ ಹುಳಿಯಾರ್

Kannada News Now 2 weeks ago

ಬೆಂಗಳೂರು : ಕನ್ನಡದ ಯಾವುದೇ ಸಾಹಿತಿಯ ಶ್ರೇಷ್ಠ ಸಾಹಿತ್ಯ ಆ ವ್ಯಕ್ತಿಗೆ ಸಂದ ಗೌರವವಲ್ಲ. ಅಂತಹ ಉನ್ನತ ಬರಹ ಸಾಹಿತ್ಯ ಲೋಕದ ಸ್ವತ್ತಾಗುತ್ತದೆ. ಮೊಗಳ್ಳಿ ಗಣೇಶ್ ರಚಿಸಿದ ಸಾಹಿತ್ಯವೂ ಕೂಡ ಕನ್ನಡದ ಆಸ್ತಿ ಎಂದು ಹಿರಿಯ ಚಿಂತಕ, ಸಾಹಿತಿ ಡಾ. ನಟರಾಜ್ ಹುಳಿಯಾರ್ ಹೇಳಿದ್ದಾರೆ.

ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದ ಕನ್ನಡ ವಿಭಾಗ ಹಾಗೂ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದಿಂದ "ಮೊಗಳ್ಳಿ ಗಣೇಶ್ ಅವರ ಸಾಹಿತ್ಯ" ಕುರಿತಾದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮೊಗಳ್ಳಿ ಗಣೇಶ್ ಬದುಕೇ ಅವರ ಕಥೆಗಳಿಗೆ ಪ್ರೇರಣೆ. ಹೈಸ್ಕೂಲ್ ಶಿಕ್ಷಣ ಮುಗಿಸಿದ ನಂತರ ಅವರ ತಂದೆ ಗಣೇಶನನ್ನು ಜೀತಕ್ಕೆ ಸೇರಿಸಲು ಹೊರಟಾಗ ಅಲ್ಲಿಂದ ತಪ್ಪಿಸಿಕೊಂಡು ಮೈಸೂರು ಸೇರಿದ ಗಣೇಶ್ ಕನ್ನಡದಲ್ಲಿ ಶ್ರೇಷ್ಠ ಸಾಹಿತ್ಯ ರಚಿಸಿದರು. ಅದ್ಭುತವಾದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅತ್ಯಂತ ಸರಳವಾಗಿ, ಸುಗಮವಾಗಿ, ಸುಲಲಿತವಾಗಿ, ಲೀಲಾಜಾಲವಾಗಿ, ಅಡ್ಡಾದಿಡ್ಡಿಯಾಗಿ, ಸ್ಪಷ್ಟವಾಗಿ ಬರೆಯುವ ಸಾಮರ್ಥ್ಯ ಗಣೇಶ್ ಅವರಿಗಿತ್ತು. ಜೀವನದಲ್ಲಿ ನೊಂದು, ಬೆಂದು, ಬಸವಳಿದು ಬರೆದ ಸಾಹಿತ್ಯ ಶ್ರೇಷ್ಠವಾದದ್ದು. ಹೀಗಾಗಿ ಯಾವುದೋ ಸಾಹಿತಿಯ ಕೃತಿ ಅವರದಲ್ಲ, ಅದು ಸಾಹಿತ್ಯದ ಸ್ವತ್ತಾಗಿ ಉಳಿಯುತ್ತದೆ ಎಂದರು.

ಮೊಗಳ್ಳಿ ಹಲವು ವಲಯಗಳು, ಹಲವು ಸಮುದಾಯಗಳ ಬಗ್ಗೆ ಬರೆದ ಸಾಹಿತ್ಯ ಉನ್ನತವಾದದ್ದು. ಅವರು ರೈತ, ಸಮಾಜವಾದಿ ಚಳಿವಳಿಗಳಿಂದ ಪ್ರೇರಿತವಾಗಿದ್ದರು. ಗಣೇಶ್ ಯುವಕನಾಗಿದ್ದಾಗ ಎಲ್ಲಿ ಬೆಳೆದ, ಹೇಗೆ ಬದುಕಿದ ಎಂಬುದು ಸಾಹಿತ್ಯ ವಿದ್ಯಾರ್ಥಿಗಳಿಗೆ ಉತ್ತಮ ವಸ್ತುವಾಗುತ್ತದೆ. ಮೊಗಳ್ಳಿ ಸಾಹಿತ್ಯವನ್ನು ಚಿಂತನೆಗೆ ಹಚ್ಚಬೇಕು. ಸಂಶೋಧನೆಗೆ ಒಳಪಡಿಸುವ ಅಗತ್ಯವಿದೆ. ಆದರೆ ವಿಮರ್ಶಾ ವಲಯ ಮೊಗಳ್ಳಿ ಅವರನ್ನು ನಿರ್ಲಕ್ಷಿಸಿತು. ಹಳ್ಳಿಗಳಲ್ಲಿ ಜಾತಿಪದ್ಧತಿ ಕೊಡುವ ಅಸಾಧ್ಯ ಹಿಂಸೆ ಕಥೆಗಾರರಿಗೆ ಸರಕಾಗುತ್ತದೆ ಎಂಬುದಕ್ಕೆ ಮೊಗಳ್ಳಿ ಗಣೇಶ್ ಉದಾಹರಣೆಯಾಗುತ್ತಾರೆ ಎಂದು ಡಾ. ನಟರಾಜ್ ಹುಳಿಯಾರ್ ಹೇಳಿದರು.

ಪೂರ್ಣಚಂದ್ರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ಸಿ. ಶಿವಾರೆಡ್ಡಿ ಮಾತನಾಡಿ, ಕನ್ನಡದಲ್ಲಿ ಶ್ರೇಷ್ಠ ಸಾಹಿತ್ಯ ಬರೆದ ಸಾಹಿತಿಗಳು ನೇಪಥ್ಯದಲ್ಲೇ ಉಳಿದಿದ್ದಾರೆ. ಶ್ರೇಷ್ಠತೆಯ ಅಂಚಿಗೂ ತಲುಪಲಾರದವರು ಸಾಹಿತ್ಯ ಕ್ಷೇತ್ರದಲ್ಲಿ ರಾರಾಜಿಸುತ್ತಿದ್ದಾರೆ. ಇಂತಹವರನ್ನು ಪೂರ್ಣಚಂದ್ರ ತೇಜಸ್ವಿ ನಕಲಿಶಾಮ ಸಾಹಿತಿಗಳು ಎನ್ನುತ್ತಿದ್ದರು. ಇವರೇ ಎಲ್ಲಾ ಕಡೆಗಳಲ್ಲಿ ಮೇಲುಗೈ ಸಾಧಿಸಿ, ಪ್ರಶಸ್ತಿ, ಸಮ್ಮಾನಗಳನ್ನು ಪಡೆದು ಮೆರೆಯುತ್ತಿದ್ದಾರೆ. ಸತ್ವವಿಲ್ಲದ ಕೃತಿಗಳನ್ನು ಓದಿ ನಮ್ಮ ಸಮಯ ವ್ಯರ್ಥಮಾಡಿಕೊಂಡಿದ್ದೇವೆ. ಆದರೆ ಶ್ರೇಷ್ಠ ಸಾಹಿತ್ಯವನ್ನು ನಾವೆಲ್ಲರೂ ಅಧ್ಯಯನ ಮಾಡಲೇಬೇಕು. ಸಾಯುವ ಮುನ್ನ ಇಂತಿಂತಹ ಕೃತಿಗಳನ್ನು ಓದಬೇಕು, ಇಂತಿಂತಹ ಸ್ಥಳಗಳನ್ನು ನೋಡಬೇಕು ಎಂಬ ಗುರಿ ಇರಬೇಕು. ನಮ್ಮ ಅಮೂಲ್ಯ ಸಮಯವನ್ನು ಅರ್ಥಪೂರ್ಣವಾಗುವಂತೆ ಕಳೆಯಬೇಕು ಎಂದರು.

ನ್ಯಾಷನಲ್ ಎಜುಕೇಶನ್ ಟ್ರಸ್ಟ್ ಸೊಸೈಟಿ ಅಧ್ಯಕ್ಷರಾದ ಡಾ. ಎಚ್.ಎನ್. ಸುಬ್ರಮಣ್ಯ, ವಿ.ಮಂಜುನಾಥ್, ಗೌರವ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Kannada News Now