ನವದೆಹಲಿ: ದೇಶದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೇರಿದಂತೆ ಸಾರ್ವಜನಿಕರಿಂದ ಮುಕ್ತ ಸಲಹೆ-ಸೂಚನೆಗಳನ್ನು ಆಹ್ವಾನಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳ ನಿರ್ವಹಣೆ, ಭದ್ರತೆ, ರಚನೆ ಮತ್ತು ಆಡಳಿತ ಸುಧಾರಣೆಗೆ ಸಮಗ್ರ ಶಿಫಾರಸು ನೀಡಲು ಕೇಂದ್ರ ಸರ್ಕಾರವು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಉನ್ನತಾಧಿಕಾರ ಕಾರ್ಯಪಡೆಯನ್ನು (HPTF) ರಚಿಸಿದೆ.
ಈ ಕಾರ್ಯಪಡೆಯು ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವುದು, ತಂತ್ರಜ್ಞಾನದ ಬಳಕೆ, ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಲಹೆ ನೀಡಲು ಯಾರಿಗೆಲ್ಲ ಅವಕಾಶ?
ಪರೀಕ್ಷಾರ್ಥಿಗಳು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗಳು, ವಿಷಯ ತಜ್ಞರು, ತಂತ್ರಜ್ಞಾನ ಪರಿಣಿತರು, ಕೈಗಾರಿಕಾ ಒಕ್ಕೂಟಗಳು, ನಾಗರಿಕ ಸಮಾಜ ಸಂಸ್ಥೆಗಳು ಹಾಗೂ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬ ನಾಗರಿಕರೂ ತಮ್ಮ ಸಲಹೆಗಳನ್ನು ಸಲ್ಲಿಸಬಹುದಾಗಿದೆ.
ಪ್ರಮುಖ ಚರ್ಚಿತ ವಿಷಯಗಳು:
ಪರೀಕ್ಷಾ ಭದ್ರತೆ ಮತ್ತು ಪಾರದರ್ಶಕತೆ ಹೆಚ್ಚಿಸುವುದು.
ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಕೃತ್ಯಗಳನ್ನು ತಡೆಗಟ್ಟಲು ಕಠಿಣ ಕ್ರಮಗಳು.
ಕಂಪ್ಯೂಟರ್ ಆಧಾರಿತ ಸುರಕ್ಷಿತ ಪರೀಕ್ಷೆಗಳು ಹಾಗೂ ಸುಧಾರಿತ ತಂತ್ರಜ್ಞಾನದ ಅಳವಡಿಕೆ.
ಸಾಮಾಜಿಕ, ಆರ್ಥಿಕ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಅನುಗುಣವಾಗಿ ಸಮಗ್ರ ಪರೀಕ್ಷಾ ನೀತಿ ರೂಪಿಸುವುದು.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮೇಲಾಗುವ ಒತ್ತಡ ನಿವಾರಣೆ ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆ ಬಲಪಡಿಸುವುದು.
ಸಲಹೆ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಸಂಪರ್ಕ ವಿವರ:
ಆಸಕ್ತರು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳು, ಇಂಗ್ಲಿಷ್ ಅಥವಾ ಹಿಂದಿಯಲ್ಲಿ 2026ರ ಸೆಪ್ಟೆಂಬರ್ 13ರೊಳಗೆ ತಮ್ಮ ಸಲಹೆಗಳನ್ನು ರವಾನಿಸಬಹುದು.
ವೆಬ್‌ಸೈಟ್: examreforms-taskforce.dopt.gov.in
ಉಚಿತ ಕರೆ ಸಂಖ್ಯೆ: 1800-180-4747
ವಾಟ್ಸಾಪ್: +91 78270 42830 ಸಂಖ್ಯೆಗೆ "hptf" ಎಂದು ಸಂದೇಶ ಕಳುಹಿಸಿ
ಇ-ಮೇಲ್: ExamReformsTaskforce@dopt.gov.in
ಸಾರ್ವಜನಿಕರಿಂದ ಸ್ವೀಕರಿಸಲಾಗುವ ಎಲ್ಲಾ ಪ್ರಮುಖ ಸಲಹೆಗಳನ್ನು ಪರಿಶೀಲಿಸಿದ ಬಳಿಕ ಕಾರ್ಯಪಡೆಯು ಅಂತಿಮ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದೆ.

