ಬೆಂಗಳೂರು: ಹಿರಿಯ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆಯ ಜವಾಬ್ದಾರಿ ನೀಡಬೇಕೆಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಕರ ಮತ್ತು ನೌಕರರ ಸಂಘ ಮುಖ್ಯಮಂತ್ರಿಗೆ ಪತ್ರ ಬರೆದಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಒಂದು ಪುಟಗಳ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಶ್ರೀವತ್ಸ ಹಾಗೂ ಸಂಘದ ಪದಾಧಿಕಾರಿಗಳು, ರಾಮಲಿಂಗ ರೆಡ್ಡಿಯವರಿಗೆ ಮುಜರಾಯಿ ಇಲಾಖೆ ಜವಾಬ್ದಾರಿ ನೀಡುವುದರಿಂದ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದ್ದಾರೆ.
ಮುಜರಾಯಿ ಸಚಿವರಾಗಿದ್ದ ಅವಧಿಯಲ್ಲಿ, ಇಲಾಖೆಯ ಇತಿಹಾಸದಲ್ಲೇ ಯಾರೂ ಮಾಡದಂತಹ ಅಭೂತಪೂರ್ವ ಕೆಲಸಗಳನ್ನು ನಿರ್ವಹಿಸಿ ಅರ್ಚಕರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು, ಅರ್ಚಕರ ವಿದ್ಯಾಭ್ಯಾಸ ಸಹಾಯ, ಮರಣ ಹೊಂದಿದಾಗ ಧನಸಹಾಯ ಹಾಗೂ ದೇವಸ್ಥಾನಗಳ ಹೆಸರಿಗೆ ಜಮೀನುಗಳನ್ನು ನೋಂದಾಯಿಸುವಂತಹ ಅನೇಕ ದೂರದರ್ಶಿತ್ವದ ನಿರ್ಧಾರಗಳನ್ನು ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ.
ಅವರ ಅವಧಿಯಲ್ಲಿ ದೇವಸ್ಥಾನಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅವರ ಈ ಕಾರ್ಯಕ್ಷಮತೆ ಮತ್ತು ಅನುಭವವನ್ನು ಗಮನದಲ್ಲಿಟ್ಟುಕೊಂಡು, ರಾಮಲಿಂಗಾರೆಡ್ಡಿ ಅವರಿಗೆ ಈಗಿರುವ ಜಲಸಂಪನ್ಮೂಲ ಖಾತೆಯ ಜೊತೆಗೆ, ಮುಜರಾಯಿ ಖಾತೆಯನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಅರ್ಚಕರ ಒಕ್ಕೂಟದ ಪರವಾಗಿ ವಿನಯಪೂರ್ವಕವಾಗಿ ಪ್ರಾರ್ಥಿಸುವುದಾಗಿ ಸಿ.ಎಂಗೆ ಸಂಘ ಮನವಿ ಮಾಡಿಕೊಂಡಿದೆ.
ರಾಮಲಿಂಗ ರೆಡ್ಡ ಅವರ ನೇತೃತ್ವದಲ್ಲಿ ದೇವಸ್ಥಾನಗಳ ಮತ್ತು ಅರ್ಚಕ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ನಾವು ನಂಬಿದ್ದೇವೆ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಕರ ಮತ್ತು ನೌಕರರ ಸಂಘ ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದೆ.

