ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲೆ ಸೇರಿದಂತೆ ಶಿವಮೊಗ್ಗದ ಸಾಗರ ಹಾಗೂ ಬೆಳಗಾವಿ ಜಿಲ್ಲೆಯ ಕೆಲವು ತಾಲ್ಲೂಕುಗಳ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಆಯಾ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ.
ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್: ಶಾಲೆ, ಅಂಗನವಾಡಿ ಬಂದ್
ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮಿತಿಮೀರಿದ್ದು, ಹವಾಮಾನ ಇಲಾಖೆಯು ಜಿಲ್ಲೆಯಾದ್ಯಂತ 'ಆರೆಂಜ್ ಅಲರ್ಟ್' ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ನೀಡಿ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಅವರು ಅಧಿಕೃತವಾಗಿ ಆದೇಶಿಸಿದ್ದಾರೆ. ನದಿ, ತೊರೆಗಳು ತುಂಬಿ ಹರಿಯುತ್ತಿರುವುದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಜಾಗರೂಕರಾಗಿರಲು ಕೋರಲಾಗಿದೆ.
ಸಾಗರ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೂ ರಜೆ
ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಪ್ರಭಾವ ಜೋರಾಗಿದ್ದು, ವಿಶೇಷವಾಗಿ ಸಾಗರ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಸ್ಥಿತಿಯನ್ನು ಅವಲೋಕಿಸಿರುವ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಅವರು ತಾಲ್ಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮಳೆಹಾನಿ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ರಜೆ ಘೋಷಣೆ
ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಯಲ್ಲೂ ವರುಣನ ಅಬ್ಬರ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಮೂರು ಪ್ರಮುಖ ತಾಲ್ಲೂಕುಗಳ ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಈ ಮೂರು ತಾಲ್ಲೂಕುಗಳ ಶಾಲೆಗಳಿಗೆ ಮಾತ್ರ ರಜೆ ಅನ್ವಯವಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

