ಜೆರುಸಲೇಂ:ಯುದ್ಧ ಪೀಡಿತ ಗಾಜಾದಲ್ಲಿ ಸಾವಿನ ಸದ್ದು ಸಾಮಾನ್ಯವಾಗಿದೆ. ಆದರೆ, ಅಲ್ಲಿನ ಪುಟ್ಟ ಮಕ್ಕಳು ತಮಗೆ ಅರಿವಿಲ್ಲದೆಯೇ ಅನುಭವಿಸುತ್ತಿರುವ ಮಾನಸಿಕ ಆಘಾತ ಎಂತಹವರ ಕಣ್ಣಲ್ಲೂ ನೀರು ತರಿಸುವಂತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಗಾಜಾದ ಮಕ್ಕಳು ತಮ್ಮ ಆಟದ ಗೊಂಬೆಗೆ ಶವಸಂಸ್ಕಾರ (Funeral) ಮಾಡುತ್ತಿರುವ ದೃಶ್ಯ ಕಂಡುಬಂದಿದ್ದು, ಇದು ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಹಸಿರು ಬಟ್ಟೆಯಲ್ಲಿ ಸುತ್ತಿದ ಪುಟ್ಟ ಗೊಂಬೆಯನ್ನು ಸಣ್ಣ ಸ್ಟ್ರೆಚರ್ ಮೇಲೆ ಮಲಗಿಸಿ, ದೊಡ್ಡವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಅನುಕರಿಸುತ್ತಾ ಮಕ್ಕಳು ಸಾಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಮಕ್ಕಳು ಆಡಬೇಕಾದ ವಯಸ್ಸಿನಲ್ಲಿ ಸಾವಿನ ಮೆರವಣಿಗೆಯನ್ನು ಆಟವನ್ನಾಗಿ ಮಾಡಿಕೊಂಡಿರುವುದು ಯುದ್ಧದ ಭೀಕರತೆಯನ್ನು ತೋರಿಸುತ್ತಿದೆ.
"ಇದು ಮಕ್ಕಳ ಬಾಲ್ಯದ ಅಂತ್ಯ" ಎಂದು ವಿಶ್ವದಾದ್ಯಂತ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತರು ಈ ವಿಡಿಯೋವನ್ನು ಹಂಚಿಕೊಂಡು, "ಮಕ್ಕಳು ಬಣ್ಣದ ಬುಗುರಿ, ಚೆಂಡಿನೊಂದಿಗೆ ಆಡಬೇಕಿತ್ತು, ಆದರೆ ಅವರು ಶವಸಂಸ್ಕಾರದ ಆಟವಾಡುತ್ತಿದ್ದಾರೆ" ಎಂದು ವಿಷಾದಿಸಿದ್ದಾರೆ.ಸದಾ ಬಾಂಬ್ ದಾಳಿ ಮತ್ತು ಸಾವು-ನೋವುಗಳನ್ನು ಕಣ್ಣಾರೆ ಕಾಣುತ್ತಿರುವ ಗಾಜಾದ ಮಕ್ಕಳ ಮನಸ್ಸಿನಲ್ಲಿ ಸಾವು ಎಂಬುದು ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದು ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಮನೋವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಈವರೆಗೆ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಮಕ್ಕಳು ಅನಾಥರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ.

