ಬರ್ಲಿನ್: ಜರ್ಮನಿಯ ಬರ್ಲಿನ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳೆಯರಿಗೆ ಮಾದಕ ವಸ್ತುಗಳನ್ನು ನೀಡಿ ಅತ್ಯಾಚಾರ ಎಸಗುತ್ತಿದ್ದ ರಹಸ್ಯ ಟೆಲಿಗ್ರಾಂ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆಯ ವೇಳೆ ಈ ಜಾಲದ ಅಡಿಯಲ್ಲಿ ನಡೆಯುತ್ತಿದ್ದ ಭೀಕರ ಕೃತ್ಯಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಕರಾಳ ಮುಖ ಅನಾವರಣಗೊಂಡಿದೆ.
ಬರ್ಲಿನ್ ಪ್ರಾಸಿಕ್ಯೂಟರ್‌ಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಜಾಲವು "ಜರ್ಮನ್ ಡ್ರೈವಿಂಗ್ ಸ್ಕೂಲ್ ಫಾರ್ಎಕ್ಸ್ಪರ್ಟ್ಸ್" ಎಂಬ ಹೆಸರಿನ ಟೆಲಿಗ್ರಾಂ ಗುಂಪನ್ನು ಹೊಂದಿತ್ತು. ಮೇಲ್ನೋಟಕ್ಕೆ ಇದು ವಾಹನ ಚಾಲನೆ ಕಲಿಯುವ ಸಾಮಾನ್ಯ ಗುಂಪಿನಂತೆ ಕಂಡರೂ, ವಾಸ್ತವದಲ್ಲಿ ಇದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮತ್ತು ಅದಕ್ಕೆ ಬೇಕಾದ ಸಲಹೆ-ಯೋಜನೆಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದ ಒಂದು ಅಕ್ರಮ ನೆಟ್‌ವರ್ಕ್ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು ಈ ಟೆಲಿಗ್ರಾಂ ಗ್ರೂಪ್‌ನ ಹಲವು ಚಾಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಈ ವೇಳೆ, ಮಹಿಳೆಯರಿಗೆ ಮಾದಕ ವಸ್ತು ಅಥವಾ ನಿದ್ರಾಜನಕಗಳನ್ನು ಹೇಗೆ ನೀಡಬೇಕು ಮತ್ತು ಅತ್ಯಾಚಾರವನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಕ್ರೂರವಾಗಿ ಚರ್ಚಿಸಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಲವು ಮಹಿಳೆಯರ ಆಕ್ಷೇಪಾರ್ಹ ಫೋಟೋ ಹಾಗೂ ವಿಡಿಯೋಗಳನ್ನು ಈ ಗ್ರೂಪ್‌ನಲ್ಲಿ ಹಂಚಿಕೊಂಡಿರುವುದು ಪತ್ತೆಯಾಗಿದ್ದು, ಇಡೀ ಸಮಾಜ ತಲೆತಗ್ಗಿಸುವಂತಿದೆ.
ಈ ಇಡೀ ಜಾಲದ ಹಿಂದೆ ಮುಖ್ಯವಾಗಿ ಚೀನೀ ಮೂಲದ ಪುರುಷರು ಇದ್ದರು ಎಂದು ತನಿಖಾಧಿಕಾರಿಗಳು ಬಲವಾಗಿ ಶಂಕಿಸಿದ್ದಾರೆ. ಜರ್ಮನಿಯಲ್ಲಿ ವಾಸಿಸುತ್ತಿದ್ದ ಚೀನೀ ಮೂಲದ ಮಹಿಳೆಯರನ್ನೇ ಈ ಗುಂಪು ಹೆಚ್ಚಾಗಿ ಗುರಿಯಾಗಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿತ್ತು ಎನ್ನಲಾಗಿದೆ. ಹಲವು ವರ್ಷಗಳಿಂದ ಸಕ್ರಿಯವಾಗಿದ್ದ ಸುಮಾರು ಎರಡು ಡಜನ್‌ಗೂ ಹೆಚ್ಚು ಟೆಲಿಗ್ರಾಂ ಗ್ರೂಪ್ ಚಾಟ್‌ಗಳನ್ನು ಸದ್ಯ ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ಈ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮೂವರು ಪ್ರಮುಖ ಆರೋಪಿಗಳಿಗೆ ಅತ್ಯಾಚಾರ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿಯ ವಿರುದ್ಧ ಬರ್ಲಿನ್ ನ್ಯಾಯಾಲಯದಲ್ಲಿ ಸದ್ಯ ವಿಚಾರಣೆ ಮುಂದುವರಿದಿದೆ. ಈ ಜಾಲದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಎಷ್ಟು ಮಹಿಳೆಯರು ಇದರ ಬಲಿಪಶುಗಳಾಗಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಆರೋಪಿಗಳು ಪೊಲೀಸರ ಕಣ್ಣಿಗೆ ಬೀಳದಿರಲು ಮತ್ತು ತಮ್ಮ ಕೃತ್ಯಗಳನ್ನು ಮುಚ್ಚಿಡಲು ಅತ್ಯಂತ ವ್ಯವಸ್ಥಿತವಾದ 'ಕೋಡ್ ವರ್ಡ್'ಗಳನ್ನು ಬಳಸುತ್ತಿದ್ದರು. ನ್ಯಾಯಾಲಯದ ದಾಖಲೆಗಳ ಪ್ರಕಾರ:
ತಮಗೇನೂ ತಿಳಿಯದ ಅಮಾಯಕ ಮಹಿಳೆಯರನ್ನು ʼಕಾರುಗಳುʼ ಎಂದು ಕರೆಯುತ್ತಿದ್ದರು.
ಅವರಿಗೆ ನೀಡುತ್ತಿದ್ದ ಮಾದಕ ಹಾಗೂ ನಿದ್ರಾಜನಕ ಔಷಧಿಗಳನ್ನು ʼಇಂಧನʼ ಎಂದು ಉಲ್ಲೇಖಿಸುತ್ತಿದ್ದರು.
ಅತ್ಯಾಚಾರ ಎಸಗುವ ಕೃತ್ಯಕ್ಕೆ ʼಡ್ರೈವಿಂಗ್ʼ ಎಂಬ ಕೋಡ್ ವರ್ಡ್ ಇಟ್ಟಿದ್ದರು.
ಇಷ್ಟೇ ಅಲ್ಲದೆ, ತಾವೇ ಸೃಷ್ಟಿಸಿದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಲಿಪಶುಗಳನ್ನು ʼಡೆಡ್ ಪಿಗಸ್ (ಸತ್ತ ಹಂದಿಗಳು)ʼ ಎಂದು ಅತ್ಯಂತ ಅವಮಾನಕರವಾಗಿ ಕರೆಯುತ್ತಿದ್ದರು.

