ಅಮರಾವತಿ: ಆಂಧ್ರಪ್ರದೇಶದ ಪೊಲಾವರಂ ಜಿಲ್ಲೆಯ ಗ್ರಾಮವೊಂದರಲ್ಲಿ ಮಲೇರಿಯಾ ತಡೆಗಟ್ಟಲು ನೀಡಲಾಗಿದ್ದ ಮಾತ್ರೆಗಳನ್ನು ಸೇವಿಸಿ 7 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ. ಗ್ರಾಮದಲ್ಲಿ ಮಲೇರಿಯಾ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ 71 ಜನರಿಗೆ 'ಕ್ಲೋರೊಕ್ವಿನ್' ಮಾತ್ರೆಗಳನ್ನು ನೀಡಲಾಗಿತ್ತು.
ಆದರೆ, ಮಾತ್ರೆ ಸೇವಿಸಿದ ಬೆನ್ನಲ್ಲೇ ಹಲವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ ಮದಿವಿ ಜಮುನಾ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಘಟನೆಯಲ್ಲಿ ಒಟ್ಟು 52 ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಅಸ್ವಸ್ಥಗೊಂಡವರ ಪೈಕಿ 29 ಜನರನ್ನು ನೆರೆರಾಜ್ಯ ತೆಲಂಗಾಣದ ಆಸ್ಪತ್ರೆಗೆ ಹಾಗೂ 24 ಜನರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಕಾರಿ ದಿನೇಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕುಶಲೋಪರಿ ವಿಚಾರಿಸಿದ್ದು, ಸಾರ್ವಜನಿಕರು ಆತಂಕ ಪಡಬಾರದೆಂದು ಮನವಿ ಮಾಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಮೂವರು ಮಕ್ಕಳ ತಜ್ಞರು ಸೇರಿದಂತೆ ವಿಶೇಷ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದ್ದು, ಗ್ರಾಮದಲ್ಲಿ ತಕ್ಷಣದಿಂದಲೇ ವೈದ್ಯಕೀಯ ಶಿಬಿರವನ್ನು ಆರಂಭಿಸಲಾಗಿದೆ.
ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಅವರು, ಘಟನೆಗೆ ಕಾರಣವಾದ ನೈಜ ಪರಿಸ್ಥಿತಿಗಳು ಮತ್ತು ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆಯ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿಗಳು, ಅಸ್ವಸ್ಥಗೊಂಡಿರುವ ಪ್ರತಿಯೊಬ್ಬರಿಗೂ ಉನ್ನತ ಮಟ್ಟದ ಅತ್ಯುತ್ತಮ ಚಿಕಿತ್ಸೆ ಖಾತರಿಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಕಾಕಿನಾಡ, ವಿಜಯವಾಡ ಮತ್ತು ರಾಜಮಹೇಂದ್ರವರಂಗಳಿಂದ ವಿಶೇಷ ವೈದ್ಯರ ತಂಡಗಳು ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿವೆ.

