Dailyhunt Logo
  • Light mode
    Follow system
    Dark mode
    • Play Story
    • App Story
SHOCKING : ಮೇಕೆ ಮಾಂಸದಲ್ಲಿ ಎಮ್ಮೆ ಮಾಂಸ ಬೆರೆಸಿ ಹೋಟೆಲ್ ಗಳಿಗೆ ಪೂರೈಕೆ : ಆಘಾತಕಾರಿ ವಿಡಿಯೋ ವೈರಲ್ |WATCH VIDEO

SHOCKING : ಮೇಕೆ ಮಾಂಸದಲ್ಲಿ ಎಮ್ಮೆ ಮಾಂಸ ಬೆರೆಸಿ ಹೋಟೆಲ್ ಗಳಿಗೆ ಪೂರೈಕೆ : ಆಘಾತಕಾರಿ ವಿಡಿಯೋ ವೈರಲ್ |WATCH VIDEO

Kannada News Now 2 weeks ago

ಹೈದರಾಬಾದ್: ಭಾಗ್ಯನಗರದ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಎರಡು ಪ್ರತ್ಯೇಕ ಆಹಾರ ಕಲಬೆರಕೆ ದಂಧೆಗಳನ್ನು ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಭೇದಿಸಿದ್ದಾರೆ. ನಗರದ ಪ್ರಖ್ಯಾತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಕಲಬೆರಕೆ ಮಾಂಸ ಹಾಗೂ ರಾಸಾಯನಿಕಯುಕ್ತ ಕೊಳೆತ ಮೀನುಗಳನ್ನು ಸರಬರಾಜು ಮಾಡುತ್ತಿದ್ದ ಐವರು ಕಿರಾತಕರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಮೇಕೆ ಮಾಂಸದ ಹೆಸರಲ್ಲಿ ಎಮ್ಮೆ ಮಾಂಸ ಮಾರಾಟ!
ಹಬೀಬ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇಪಲ್ಲಿಯಲ್ಲಿ ಮೊಹಮ್ಮದ್ ಉಸ್ಮಾನ್ ಖುರೇಶಿ ಎಂಬಾತ ಅಕ್ರಮವಾಗಿ ಮಾಂಸದ ವ್ಯಾಪಾರ ನಡೆಸುತ್ತಿದ್ದ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮೇಕೆ ಮಾಂಸ ಎಂದು ಹೇಳಿ ಎಮ್ಮೆ ಮಾಂಸವನ್ನು ಬೆರೆಸಿ ನಗರದ ಪ್ರತಿಷ್ಠಿತ ಹೋಟೆಲ್‌ಗಳಿಗೆ ಈತ ಸರಬರಾಜು ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಸುಮಾರು 50 ಕೆಜಿ ಕಲಬೆರಕೆ ಮಾಂಸವನ್ನು ಜಪ್ತಿ ಮಾಡಿದೆ. ಈ ಮಾಂಸದ ಸ್ಯಾಂಪಲ್‌ಗಳನ್ನು ಮುಂದಿನ ಪರೀಕ್ಷೆಗಾಗಿ ನಾಚಾರಂನಲ್ಲಿರುವ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ದುರ್ವಾಸನೆ ತಡೆಯಲು ಕೆಮಿಕಲ್ ಬಳಕೆ: ಸಿಕ್ಕಿಬಿದ್ದ ದಂಧೆಕೋರರು
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಮಂಗಳಹಾಟ್ ಪೊಲೀಸ್ ವ್ಯಾಪ್ತಿಯ "ತಾರ ಫಿಶರೀಸ್" ಅಂಗಡಿಯ ಮೇಲೆ ಟಾಸ್ಕ್‌ಫೋರ್ಸ್ ಪೊಲೀಸರು ದಾಳಿ ನಡೆಸಿದ್ದಾರೆ. ಬೀಗಂಬಜಾರ್ ಮಾರುಕಟ್ಟೆಯಿಂದ ಅತ್ಯಂತ ಅಗ್ಗದ ದರಕ್ಕೆ ಕೊಳೆತ ಮೀನು ಮತ್ತು ಸೀಗಡಿಗಳನ್ನು ತರುತ್ತಿದ್ದ ಈ ಜಾಲ, ಅವುಗಳಿಂದ ಕೆಟ್ಟ ವಾಸನೆ ಬರದಂತೆ ತಡೆಯಲು ಹಾಗೂ ನೋಡಲು ತಾಜಾ ಆಗಿ ಕಾಣುವಂತೆ ಮಾಡಲು 'ಸೋಡಿಯಂ ಬೈಕಾರ್ಬೋನೇಟ್' ರಾಸಾಯನಿಕ ಪುಡಿಯನ್ನು ಬಳಸುತ್ತಿತ್ತು. ಈ ವಿಷಕಾರಿ ಮೀನುಗಳನ್ನು ಹೋಟೆಲ್‌ ಹಾಗೂ ಕ್ಯಾಟರಿಂಗ್‌ಗಳಿಗೆ ಸಪ್ಲೈ ಮಾಡಲಾಗುತ್ತಿತ್ತು. ಈ ಸಂಬಂಧ ಅಂಗಡಿ ನಿರ್ವಾಹಕರಾದ ಶಂಕರ್ ಸಿಂಗ್, ಮಾನ್ ಸಿಂಗ್, ಗುಲಾಬ್ ಸಿಂಗ್ ಹಾಗೂ ರೋಹಿತ್ ಸಿಂಗ್ ಎಂಬ ನಾಲ್ವರನ್ನು ಹೆಡೆಮುರಿ ಕಟ್ಟಲಾಗಿದೆ.

ಆರೋಪಿಗಳಿಂದ ಬರೋಬ್ಬರಿ 90 ಸಾವಿರ ರೂಪಾಯಿ ಮೌಲ್ಯದ 100 ಕೆಜಿ ಕೊಳೆತ ಸೀಗಡಿ, 162 ಕೆಜಿ ಕೊಳೆತ ಮೀನು, 10 ಕೆಜಿ ಸೋಡಿಯಂ ಬೈಕಾರ್ಬೋನೇಟ್ ಕೆಮಿಕಲ್ ಪುಡಿ ಹಾಗೂ 6 ಚೀಲ ಉಪ್ಪನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಬಂಧಿತರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ಪ್ರಭಾವಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜನರು ಕೂಡ ಎಚ್ಚರಿಕೆಯಿಂದ ಇರಬೇಕು ಮತ್ತು ಅನುಮಾನಾಸ್ಪದ ಆಹಾರ ಪದಾರ್ಥಗಳು ಕಂಡುಬಂದರೆ ತಕ್ಷಣವೇ ದೂರು ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now