ತನ್ನ ಲಿವ್-ಇನ್ ಪಾರ್ಟ್‌ನರ್ ಈಗಾಗಲೇ ಮದುವೆಯಾಗಿದ್ದಾನೆ ಎಂಬ ಸತ್ಯವನ್ನು ತಿಳಿದು ಆತನನ್ನು ಪ್ರಶ್ನಿಸಿದ 23 ವರ್ಷದ ಯುವತಿಯೊಬ್ಬಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು 35 ವರ್ಷದ ಚಿನ್ನದ ವ್ಯಾಪಾರಿ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ದಾಳಿಯಿಂದ ತೀವ್ರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಯುವತಿ ದಿವ್ಯಾ ಕಟಾರಿಯಾ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಎಂಟು ದಿನಗಳ ನಂತರ ಸಾವನ್ನಪ್ಪಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಗುರುಗ್ರಾಮ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಮೃತ ಯುವತಿ ದಿವ್ಯಾ ಕಟಾರಿಯಾ ಒಂದು ವರ್ಷದ ಹಿಂದೆ ತನ್ನ ಒಡವೆಗಳನ್ನು ಮಾರಾಟ ಮಾಡಲು ಹರಿಯಾಣದ ಝಜ್ಜರ್ ಮೂಲದ ಸುನಿಲ್ ಕುಮಾರ್‌ನ ಚಿನ್ನದ ಅಂಗಡಿಗೆ ಹೋಗಿದ್ದಳು. ಅಲ್ಲಿ ಅವರಿಬ್ಬರ ನಡುವೆ ಪರಿಚಯವಾಗಿ, ಅದು ಪ್ರೇಮ ಸಂಬಂಧಕ್ಕೆ ತಿರುಗಿತ್ತು. ಆದರೆ, ಇತ್ತೀಚೆಗೆ ಸುನಿಲ್‌ಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಷಯ ದಿವ್ಯಾಗೆ ತಿಳಿದುಬಂದಿದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಕಳೆದ ಜೂನ್ 18 ರಂದು ದಿವ್ಯಾ ಈ ವಿಷಯದ ಕುರಿತು ಸುನಿಲ್‌ನನ್ನು ಆತನ ಅಂಗಡಿಯಲ್ಲೇ ತರಾಟೆಗೆ ತಗೆದುಕೊಂಡಿದ್ದಳು. ಈ ವೇಳೆ ಇಬ್ಬರ ನಡುವೆ ಭಾರಿ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಸುನಿಲ್ ಆಕೆಯ ಮೇಲೆ ಸೀಮೆಎಣ್ಣೆ ಸುರಿದಿದ್ದನು. ಆದರೆ ಆ ಸಮಯದಲ್ಲಿ ಆಕೆಗೆ ಬೆಂಕಿ ಹಚ್ಚಿರಲಿಲ್ಲ. ಈ ಜಗಳವನ್ನು ಬಗೆಹರಿಸಿಕೊಳ್ಳುವ ಉದ್ದೇಶದಿಂದ ದಿವ್ಯಾ ಸೊಹ್ರಾ ರಸ್ತೆಯಲ್ಲಿರುವ ಸೆಂಟ್ರಲ್ ಪಾರ್ಕ್‌ನ ಫ್ಲಾಟ್ ಒಂದನ್ನು ಬುಕ್ ಮಾಡಿದ್ದು, ಇಬ್ಬರೂ ಅಂದು ರಾತ್ರಿ ಅಲ್ಲೇ ಉಳಿದುಕೊಂಡಿದ್ದರು.
ಮರುದಿನ ಬೆಳಗ್ಗೆ ಸುನಿಲ್, ನಿನ್ನ ಬಟ್ಟೆಯಿಂದ ಸೀಮೆಎಣ್ಣೆ ವಾಸನೆ ಕಡಿಮೆಯಾಗಿದೆ ಎಂದು ಹೇಳಿ ಅದೇ ಬಟ್ಟೆಯನ್ನು ಧರಿಸುವಂತೆ ದಿವ್ಯಾಗೆ ತಿಳಿಸಿದ್ದನು. ಆಕೆ ಆ ಬಟ್ಟೆ ಧರಿಸಿದ ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ಮತ್ತೊಂದು ಸುತ್ತಿನ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಸುನಿಲ್ ಆಕೆಗೆ ಬೆಂಕಿ ಹಚ್ಚಿದ್ದಾನೆ. ದಿವ್ಯಾ ಕಿರುಚಾಡಲು ಆರಂಭಿಸಿದಾಗ ಗಾಬರಿಗೊಂಡ ಆರೋಪಿ ತಾನೇ ಸ್ವತಃ ಆಕೆಯನ್ನು ಗುರುಗ್ರಾಮದ ಆರ್ಟೆಮಿಸ್ ಆಸ್ಪತ್ರೆಗೆ ದಾಖಲಿಸಿದ್ದನು. ಆದರೆ ಗಾಯಗಳು ಗಂಭೀರವಾಗಿದ್ದರಿಂದ ಆಕೆಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿವ್ಯಾ ಜೂನ್ 27 ರಂದು ಕೊನೆಯುಸಿರೆಳೆದಿದ್ದಾಳೆ. ಆರಂಭದಲ್ಲಿ ಸುನಿಲ್ ನೀಡಿದ್ದ ಜೀವ ಬೆದರಿಕೆಗೆ ಹೆದರಿ ದಿವ್ಯಾ ಮತ್ತು ಆಕೆಯ ತಾಯಿ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದರು. ಆದರೆ, ಜೂನ್ 22 ರಂದು ಆಸ್ಪತ್ರೆಯಲ್ಲಿದ್ದಾಗ ದಿವ್ಯಾ ತನ್ನ ಸೋದರಸಂಬಂಧಿಗೆ ಸುನಿಲ್ ತನಗೆ ಬೆಂಕಿ ಹಚ್ಚಿರುವ ನಿಜಸಂಗತಿಯನ್ನು ತಿಳಿಸಿದ್ದಳು. ಜೂನ್ 30 ರಂದು ಆ ಸೋದರಸಂಬಂಧಿ ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ಮರುಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಸೆಕ್ಟರ್ 9ಎ ಪೊಲೀಸರು ಆರೋಪಿಯನ್ನು ಬಂಧಿಸಿ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕೋರ್ಟ್ ಆರೋಪಿಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

