Dailyhunt Logo
  • Light mode
    Follow system
    Dark mode
    • Play Story
    • App Story
ಸುಪ್ರೀಂ ಕೋರ್ಟ್‌ನಿಂದ NCERT ಪಠ್ಯಪುಸ್ತಕ ಪ್ರಕರಣದ ಸ್ವಯಂಪ್ರೇರಿತ ವಿಚಾರಣೆ ಅಂತ್ಯ

ಸುಪ್ರೀಂ ಕೋರ್ಟ್‌ನಿಂದ NCERT ಪಠ್ಯಪುಸ್ತಕ ಪ್ರಕರಣದ ಸ್ವಯಂಪ್ರೇರಿತ ವಿಚಾರಣೆ ಅಂತ್ಯ

Kannada News Now 1 week ago

ವದೆಹಲಿ: 8ನೇ ತರಗತಿಯ ಎನ್‌ಸಿ‌ಇಆರ್‌ಟಿ (NCERT) ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿವಾದಾತ್ಮಕ ಭಾಗವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ (ಸುಒ ಮೊಟು) ವಿಚಾರಣೆಯನ್ನು ಮಂಗಳವಾರ ಅಧಿಕೃತವಾಗಿ ಮುಕ್ತಾಯಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ. ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ಸಲಹೆಯಂತೆ ವಿವಾದಾತ್ಮಕ ಅಧ್ಯಾಯವನ್ನು ತೆಗೆದುಹಾಕಿ ಹೊಸ ಅಧ್ಯಾಯವನ್ನು ಸೇರಿಸಲಾಗಿದ್ದು, ನೂತನ ಪಠ್ಯಪುಸ್ತಕಗಳು ಈಗಾಗಲೇ ವಿತರಣೆಯಲ್ಲಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ವಿಚಾರಣೆ ವೇಳೆ ಮೇ 22ರ ಆದೇಶದಲ್ಲಿದ್ದ ಹೇಳಿಕೆಯೊಂದರ ಕುರಿತು ಸ್ಪಷ್ಟನೆ ನೀಡಿದ ಸುಪ್ರೀಂ ಕೋರ್ಟ್, "ಪಠ್ಯಕ್ರಮವನ್ನು ಎಲ್ಲಾ ಹಂತಗಳ ಸಮಿತಿಯ ಮುಂದೆ ಮಂಡಿಸಿರಲಿಲ್ಲ, ಹಾಗಾಗಿ ಇದು ಸಾಮೂಹಿಕ ನಿರ್ಧಾರವಾಗಿರಲಿಲ್ಲ" ಎಂದು ದಾಖಲಾಗಿದ್ದ ಅಂಶವು ಸಾಲಿಸಿಟರ್ ಜನರಲ್ ಅವರ ಸಲ್ಲಿಕೆಯಾಗಿತ್ತೇ ವಿನಃ ನ್ಯಾಯಾಲಯದ ವೀಕ್ಷಣೆ ಅಥವಾ ತೀರ್ಪಲ್ಲ ಎಂದು ಸ್ಪಷ್ಟಪಡಿಸಿತು.

ಅಕಾಡೆಮಿಕ್‌ಗಳ ಪರವಾಗಿ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್ ಅವರು, ನ್ಯಾಯಾಲಯದ ಈ ಮುಂಚಿನ ಮಾತುಗಳು ಜಡ್ಜ್‌ಮೆಂಟ್‌ನಂತೆ ಬಿಂಬಿತವಾದರೆ ಶಿಕ್ಷಣತಜ್ಞರಿಗೆ ಅನ್ಯಾಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಾವು ಯಾವುದೇ ಅಕಾಡೆಮಿಕ್‌ಗಳ ಮೇಲೆ ಆರೋಪ ಮಾಡಿರಲಿಲ್ಲ, ವಾಸ್ತವಿಕವಾಗಿ ಪಠ್ಯಕ್ರಮವು ಸಮಿತಿಯ ಮುಂದೆ ಬಂದಿರಲಿಲ್ಲ ಎಂದಷ್ಟೇ ಹೇಳಿದ್ದಾಗಿ ತಿಳಿಸಿದರು.

ಇದಕ್ಕೂ ಮುನ್ನ ಮಾರ್ಚ್ 11ರಂದು ನೀಡಿದ್ದ ಆದೇಶದಲ್ಲಿದ್ದ ಕೆಲವು ಕಠಿಣ ಮಾತುಗಳನ್ನು ಸುಪ್ರೀಂ ಕೋರ್ಟ್ ಹಿಂಪಡೆದಿತ್ತು. ಪ್ರೊಫೆಸರ್ ಮೈಕೆಲ್ ಡಾನಿನೋ, ಸುಪರ್ಣ ದಿವೇಕರ್ ಮತ್ತು ಅಲೋಕ್ ಪ್ರಸನ್ನ ಕುಮಾರ್ ಎಂಬ ಮೂವರು ಶಿಕ್ಷಣತಜ್ಞರು ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತರಲು "ತಿಳಿದೇ ಈ ರೀತಿ ಮಾಡಿದ್ದಾರೆ" ಎಂದು ದಾಖಲಾಗಿದ್ದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಪಠ್ಯ ರಚನೆಯು ಸಾಮೂಹಿಕ ಪ್ರಕ್ರಿಯೆಯಾಗಿದ್ದು, ಯಾವುದೇ ಒಬ್ಬ ವ್ಯಕ್ತಿಯು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಕಾಡೆಮಿಕ್‌ಗಳು ನೀಡಿದ ವಿವರಣೆಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ಅಲ್ಲದೆ, ಈ ವಿಷಯದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿತ್ತು.

ಫೆಬ್ರವರಿ 26ರಂದು ಈ ಪ್ರಕರಣದ ಗಂಭೀರತೆ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ನ್ಯಾಯಾಂಗದ ಮೇಲಿನ ಈ ರೀತಿಯ ವಿಷಯಗಳು ನ್ಯಾಯಾಂಗ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸಿ 8ನೇ ತರಗತಿಯ ಆ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮುದ್ರಣ, ಮರುಮುದ್ರಣ ಮತ್ತು ಡಿಜಿಟಲ್ ಹಂಚಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ತದನಂತರ ಹೊಸ ಪಠ್ಯಕ್ರಮ ರೂಪಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು. ಈಗ ವಿವಾದಾತ್ಮಕ ಭಾಗವನ್ನು ಬದಲಾಯಿಸಿ ಹೊಸ ಪುಸ್ತಕಗಳನ್ನು ತಂದಿರುವುದರಿಂದ ನ್ಯಾಯಾಲಯ ತನ್ನ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now