Dailyhunt Logo
  • Light mode
    Follow system
    Dark mode
    • Play Story
    • App Story
ತಂಗಿ ಸಾವಿಗೆ ನ್ಯಾಯ ಸಿಗಲಿ, ಕಾಣದ ಕೈಗಳಿಗೆ ತಕ್ಕ ಶಿಕ್ಷೆಯಾಗಲಿ: ವಾಣಿಶ್ರೀ ಸಹೋದರಿಯ ಕಣ್ಣೀರ ಆಕ್ರಂದನ

ತಂಗಿ ಸಾವಿಗೆ ನ್ಯಾಯ ಸಿಗಲಿ, ಕಾಣದ ಕೈಗಳಿಗೆ ತಕ್ಕ ಶಿಕ್ಷೆಯಾಗಲಿ: ವಾಣಿಶ್ರೀ ಸಹೋದರಿಯ ಕಣ್ಣೀರ ಆಕ್ರಂದನ

Kannada News Now 1 week ago

ಶಿವಮೊಗ್ಗ: "ಕೂಲಿ ಮಾಡಿ ಕಷ್ಟಪಟ್ಟು ಬೆಳೆಸಿದ ನಮ್ಮ ಕುಟುಂಬಕ್ಕೆ ಆಸರೆಯಾಗಬೇಕಿದ್ದ ತಂಗಿ ಇಂದು ಇಲ್ಲವಾಗಿದ್ದಾಳೆ. ಅವಳ ಸಾವಿಗೆ ಕಾರಣರಾದವರನ್ನು ರಕ್ಷಿಸಲು ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಬಡವರೆಂಬ ಕಾರಣಕ್ಕೆ ಪ್ರಕರಣವನ್ನು ಮುಚ್ಚಿಹಾಕಲು ಬಿಡುವುದಿಲ್ಲ.

ನನ್ನ ತಂಗಿಯ ಆತ್ಮಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು" ಎಂದು ಸಾಗರ ತಾಲ್ಲೂಕಿನ ಬೆಳಲಮಕ್ಕಿ ಗ್ರಾಮದ ಮೃತ ಯುವತಿ ವಾಣಿಶ್ರೀ ಅವರ ಸಹೋದರಿ ಪೂಜಾ ಕಣ್ಣೀರಿಡುತ್ತಲೇ ನ್ಯಾಯಕ್ಕಾಗಿ ಗದ್ಗದಿತ ಕಂಠದಿಂದ ಅಂಗಲಾಚಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿಯಲ್ಲಿ ಆಯೋಜಿಸಲಾಗಿದ್ದ ಜಸ್ಟೀಸ್ ಫಾರ್ ವಾಣಿಶ್ರೀ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ತಂಗಿಯ ಭಾವಚಿತ್ರದ ಮುಂದೆ ನಿಂತು ಮಾತನಾಡಿದ ಅವರು, ಒಡಹುಟ್ಟಿದವಳನ್ನು ಕಳೆದುಕೊಂಡ ತೀವ್ರ ವೇದನೆ ಹಾಗೂ ಆಕ್ರೋಶವನ್ನು ಹೊರಹಾಕಿದರು.

ಕಷ್ಟದ ನಡುವೆ ಅರಳಿದ ಬದುಕು, ಅರ್ಧಕ್ಕೇ ಮುರಿದ ಕನಸಿನ ಗೂಡು

ತಂದೆ-ತಾಯಿ ಕೂಲಿ ನಾಲಿ ಮಾಡಿ, ಪರೀಕ್ಷಾ ಶುಲ್ಕ ಕಟ್ಟಲು ಪರದಾಡಿ ಇಬ್ಬರು ಹೆಣ್ಣುಮಕ್ಕಳನ್ನು ಪದವಿಯವರೆಗೆ ಓದಿಸಿದ್ದರು. ಪಿಯುಸಿಯಲ್ಲಿ ಶೇ. 80ಕ್ಕೂ ಅಧಿಕ ಅಂಕ ಪಡೆದಿದ್ದಾಗ ಊರಲ್ಲೇ ಬ್ಯಾನರ್ ಹಾಕಿ ತಂಗಿಯ ಸಾಧನೆಯನ್ನು ಸಂಭ್ರಮಿಸಲಾಗಿತ್ತು. ಆದರೆ ಇಂದು ಅದೇ ಫೋಟೋಗೆ ಹಾರ ಹಾಕಿ ನೋಡುವಂತಹ ಕ್ರೂರ ಪರಿಸ್ಥಿತಿ ಬಂದೊದಗಿದೆ ಎಂದು ಕಣ್ಣೀರಾದರು.

ಇಬ್ಬರೂ ದುಡಿದು ತಂದೆ-ತಾಯಿಯ ಸಾಲ ತೀರಿಸಿ, ಸ್ವಂತದೊಂದು ಪುಟ್ಟ ಮನೆ ಕಟ್ಟಬೇಕೆಂಬ ಆಸೆಯಿಂದ ಪ್ರತಿ ತಿಂಗಳ ಸಂಬಳವನ್ನು ಕೂಡಿಡುತ್ತಿದ್ದೆವು. ಸದಾ ಲವಲವಿಕೆಯಿಂದ ಮಾತನಾಡುತ್ತಿದ್ದ ತಂಗಿ ಇಂದು ಶಾಶ್ವತ ಮೌನಕ್ಕೆ ಶರಣಾಗಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಒಡಲ ನೋವು ತೋಡಿಕೊಂಡರು.

ಊಹಾಪೋಹಗಳಿಗೆ ಧಿಕ್ಕಾರ - ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದು ನಿಲ್ಲಲಿ

ಯಾವುದೇ ಒಂದು ಘಟನೆ ನಡೆದಾಗ ಅದರ ಅಸಲಿ ವಾಸ್ತವ ತಿಳಿಯದೆ ಸಮಾಜದಲ್ಲಿ ಇಲ್ಲಸಲ್ಲದ ಕಥೆ ಕಟ್ಟಿ ಊಹಾಪೋಹಗಳನ್ನು ಹಬ್ಬಿಸುವುದು ಅತ್ಯಂತ ನೋವಿನ ಸಂಗತಿ. ಯಾರಿಗೂ ಇನ್ನೊಬ್ಬರ ಚಾರಿತ್ರ್ಯಕ್ಕೆ ಸರ್ಟಿಫಿಕೇಟ್ ನೀಡುವ ಹಕ್ಕಿಲ್ಲ. ಆಕೆ ಯಾರದ್ದೋ ತೀವ್ರ ಒತ್ತಡ ಹಾಗೂ ಅನ್ಯಾಯಕ್ಕೆ ಬಲಿಯಾಗಿದ್ದಾಳೆಯೇ ಹೊರತು ಆಕಸ್ಮಿಕವಾಗಿ ಈ ಹಂತಕ್ಕೆ ಹೋಗಿಲ್ಲ. ಆಕೆಯ ಡೆತ್‌ನೋಟ್‌ನಲ್ಲೂ ತನಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಿ ಎಂದೇ ಸ್ಪಷ್ಟವಾಗಿ ಬರೆದಿಡಲಾಗಿದೆ ಎಂದು ವಾಣಿಶ್ರೀ ಸಹೋದರಿ ಪೂಜಾ ಬಿಕ್ಕಿ ಬಿಕ್ಕಿ ಅತ್ತರು.

ಕಾಣದ ಕೈಗಳ ಷಡ್ಯಂತ್ರ ಹಾಗೂ ನ್ಯಾಯಕ್ಕಾಗಿ ಆಗ್ರಹ

ಬಡ ಕುಟುಂಬ ಎಂಬ ಕಾರಣಕ್ಕೆ ಆರ್ಥಿಕ ಹಾಗೂ ಪ್ರಭಾವಿ ಶಕ್ತಿಗಳು ತಪ್ಪಿತಸ್ಥರ ಪರವಾಗಿ ನಿಂತು ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಸುತ್ತಿವೆ. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರಿಗೆ ಕಾನೂನಾತ್ಮಕ ಶಿಕ್ಷೆಯಾಗಬೇಕು ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಕಾಣದ ಕೈಗಳನ್ನು ಬಯಲಿಗೆಳೆಯಬೇಕು. ಇಂತಹ ಕರಾಳ ದುರಂತ ಇನ್ಯಾವ ಬಡ ಕುಟುಂಬದ ಹೆಣ್ಣುಮಗಳಿಗೂ ಬರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಕಷ್ಟದ ಸಂದರ್ಭದಲ್ಲಿ ಸಾಂತ್ವನ ನೀಡಿದವರಿಗೆ ಕೃತಜ್ಞತೆ

ಇಡೀ ಕುಟುಂಬ ಕಂಗಾಲಾಗಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಗ ಮನೆಗೆ ಬಂದು ಅಣ್ಣನ ಸ್ಥಾನದಲ್ಲಿ ನಿಂತು ಧೈರ್ಯ ತುಂಬಿದ ಜಿ.ಟಿ.ಸತ್ಯನಾರಾಯಣ ತುಮರಿ ಸರ್ ಹಾಗೂ ಅವರ ಇಡೀ ತಂಡಕ್ಕೆ ಸಹೋದರಿ ತುಂಬು ಹೃದಯದ ಧನ್ಯವಾದ ಅರ್ಪಿಸಿದರು. ಸಮಾಜ ಹಾಗೂ ಸ್ಥಳೀಯರು ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವುದೇ ನಮಗೆ ಆಸರೆಯಾಗಿದೆ ಎಂದು ತಿಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Dailyhunt
Disclaimer: This content has not been generated, created or edited by Dailyhunt. Publisher: Kannada News Now