Dailyhunt Logo
  • Light mode
    Follow system
    Dark mode
    • Play Story
    • App Story
ತಪ್ಪುದಾರಿಗೆಳೆಯುವ ಜಾಹೀರಾತು, ಲೇಬಲ್ ಬಳಕೆ: ಹೆರಿಟೇಜ್ ಸೇರಿದಂತೆ ಮೂರು ಪ್ರಮುಖ ಆಹಾರ ಬ್ರ್ಯಾಂಡ್‌ಗಳಿಗೆ FSSAI ನೋಟಿಸ್

ತಪ್ಪುದಾರಿಗೆಳೆಯುವ ಜಾಹೀರಾತು, ಲೇಬಲ್ ಬಳಕೆ: ಹೆರಿಟೇಜ್ ಸೇರಿದಂತೆ ಮೂರು ಪ್ರಮುಖ ಆಹಾರ ಬ್ರ್ಯಾಂಡ್‌ಗಳಿಗೆ FSSAI ನೋಟಿಸ್

Kannada News Now 2 weeks ago

​ಗ್ರಾಹಕರು ಆರೋಗ್ಯಕರ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಮಾನ್ಯವಾಗಿ ಪ್ಯಾಕೆಟ್‌ಗಳ ಮೇಲಿರುವ ಲೇಬಲ್‌ಗಳನ್ನು ನಂಬುತ್ತಾರೆ. ಆದರೆ, ಆಹಾರ ಪೊಟಣಗಳ ಮೇಲಿರುವ ಕೆಲವು ದಿಕ್ಕುತಪ್ಪಿಸುವ ಸುಳ್ಳು ಹಕ್ಕುಗಳು ಗ್ರಾಹಕರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತವೆ.

ಈ ಹಿನ್ನೆಲೆಯಲ್ಲಿ ನಿಖರ ಹಾಗೂ ಪ್ರಾಮಾಣಿಕ ಲೇಬಲ್ ಬಳಕೆಯ ಮಹತ್ವವನ್ನು ಒತ್ತಿಹೇಳಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI), ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮೂರು ಪ್ರಮುಖ ಆಹಾರ ಬ್ರ್ಯಾಂಡ್‌ಗಳಿಗೆ ನೋಟಿಸ್ ಜಾರಿ ಮಾಡಿದೆ.

ಹಲವು ಆಹಾರ ಉದ್ಯಮ ಸಂಸ್ಥೆಗಳು (FBOs) ಜಾಹೀರಾತು, ಆರೋಗ್ಯದ ಮೇಲಿನ ಹಕ್ಕುಗಳು ಮತ್ತು ಉತ್ಪನ್ನದ ಲೇಬಲಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ. ಈ ಉಲ್ಲಂಘನೆಗಳಿಗೆ ಸೂಕ್ತ ವಿವರಣೆ ನೀಡುವಂತೆ ಮತ್ತು ತಕ್ಷಣವೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.

​ಇದರಲ್ಲಿ ಮೊದಲ ನೋಟಿಸ್ ಅನ್ನು 'ಹೆರಿಟೇಜ್ ಫ್ರೆಶ್ ಪನೀರ್' ಸಂಸ್ಥೆಗೆ ನೀಡಲಾಗಿದ್ದು, ಅದು 'ಫ್ರೆಶ್ ಪನೀರ್' (ತಾಜಾ ಪನೀರ್) ಎಂಬ ಪದವನ್ನು ಬಳಸಿರುವುದನ್ನು ಪ್ರಾಧಿಕಾರ ಪ್ರಶ್ನಿಸಿದೆ. ನಿಯಮಾವಳಿಗಳ ಪ್ರಕಾರ, ಈ ಉತ್ಪನ್ನವು 'ಫ್ರೆಶ್' ಎಂಬ ಪದವನ್ನು ಬಳಸಲು ಇರಬೇಕಾದ ನಿಗದಿತ ಮಾನದಂಡಗಳನ್ನು ಪೂರೈಸುತ್ತಿಲ್ಲ. ಈ ಪದದ ಬಳಕೆಯು ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ ಎಂದು ಎಫ್‌ಎಸ್‌ಎಸ್‌ಎಐ ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲದೆ, ಕಂಪನಿಯು ತನ್ನ ಟ್ರೇಡ್‌ಮಾರ್ಕ್‌ನಲ್ಲಿ 'ಹೆಲ್ತಿ ಹ್ಯಾಪಿನೆಸ್' (ಆರೋಗ್ಯಕರ ಸಂತೋಷ) ಎಂದು ಬಳಸಿರುವುದನ್ನೂ ಆಕ್ಷೇಪಿಸಲಾಗಿದ್ದು, ಇಂತಹ ಪದಗಳು ಉತ್ಪನ್ನವು ಸಹಜವಾಗಿಯೇ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬ ತಪ್ಪು ಸಂದೇಶವನ್ನು ರವಾನಿಸುತ್ತವೆ ಎಂದು ಸಂಸ್ಥೆ ಹೇಳಿದೆ.

​ಇನ್ನೊಂದು ನೋಟಿಸ್ ಅನ್ನು 'ಲಾ ಕಾಸಾ ವೆಗನ್ ಹ್ಯಾಝೆಲ್‌ನೆಟ್ ಚಾಕೊಲೇಟ್ ಸ್ಪ್ರೆಡ್' ಸಂಸ್ಥೆಗೆ ನೀಡಲಾಗಿದೆ. ಈ ಉತ್ಪನ್ನದ ಪ್ಯಾಕೆಟ್ ಮೇಲೆ 'ಸಂಪೂರ್ಣ ನೈಸರ್ಗಿಕ' (All Natural), '100 ಪ್ರತಿಶತ ಆರ್ಗಾನಿಕ್' ಮತ್ತು 'ವೆಗನ್' ಎಂದು ಮುದ್ರಿಸಲಾಗಿತ್ತು. ಆದರೆ, 'ಆಲ್ ನ್ಯಾಚುರಲ್' ಎಂಬ ಹಕ್ಕು ನೈಸರ್ಗಿಕ ಪದದ ಬಳಕೆಗೆ ಇರುವ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಪ್ರಾಧಿಕಾರ ಪತ್ತೆಹಚ್ಚಿದೆ. ಇದಲ್ಲದೆ, ತನ್ನ ಎಫ್‌ಎಸ್‌ಎಸ್‌ಎಐ ಲೈಸೆನ್ಸ್‌ನಲ್ಲಿ ಆರ್ಗಾನಿಕ್ ಮತ್ತು ವೆಗನ್ ಮುದ್ರೆಗಳನ್ನು ಬಳಸಲು ಕಂಪನಿಯು ಯಾವುದೇ ಮುಂಚಿತ ಅನುಮತಿಯನ್ನು ಪಡೆದುಕೊಂಡಿಲ್ಲ. ಇನ್ನು ಆಹಾರ ಸುರಕ್ಷತಾ ಕಾಯ್ದೆಯಡಿ '100 ಪ್ರತಿಶತ' ಎಂಬ ಪ್ರಚಾರದ ಪದಕ್ಕೆ ಯಾವುದೇ ನಿಖರವಾದ ವ್ಯಾಖ್ಯಾನವಿಲ್ಲದ ಕಾರಣ, ಇಂತಹ ಭಾಷೆಯ ಬಳಕೆ ಕಾನೂನುಬಾಹಿರ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

​ಮೂರನೇದಾಗಿ, 'ಸಿಪ್ಜರ್ ನ್ಯೂಟ್ರಾಸ್ಯುಟಿಕಲ್ಸ್' ಸಂಸ್ಥೆಯ ಜ್ಯೂಸ್ ಕ್ಯಾಪ್ಸುಲ್‌ಗಳು ನಿಯಂತ್ರಕ ಸಂಸ್ಥೆಯ ಕೆಣ್ಣಿಗೆ ಬಿದ್ದಿವೆ. ಈ ಉತ್ಪನ್ನದ ಮೇಲೆ 'ಎಫ್‌ಎಸ್‌ಎಸ್‌ಎಐ ಅಂಗೀಕರಿಸಿದೆ' (FSSAI Approved), 'ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ' ಮತ್ತು 'ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ' ಎಂದು ಬರೆಯಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಈ ಸ್ವಾಯತ್ತ ಸಂಸ್ಥೆಯು, ಪ್ರಾಧಿಕಾರವು ಯಾವುದೇ ವೈಯಕ್ತಿಕ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಅನುಮೋದಿಸುವುದಿಲ್ಲ, ಆದ್ದರಿಂದ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ 'ಎಫ್‌ಎಸ್‌ಎಸ್‌ಎಐ ಅನುಮೋದಿತ' ಎಂದು ಬರೆಯುವಂತಿಲ್ಲ ಎಂದು ಎಚ್ಚರಿಸಿದೆ. ಅಲ್ಲದೆ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ದೇಹವನ್ನು ಸ್ವಚ್ಛಗೊಳಿಸುವ (Detoxification) ಇವರ ಹಕ್ಕುಗಳಿಗೆ ಯಾವುದೇ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದೆ. ಈ ಕ್ಯಾಪ್ಸುಲ್ ಪ್ಯಾಕೆಟ್ ಮೇಲೆ ಟೊಮೆಟೊ, ಸೌತೆಕಾಯಿ ಮತ್ತು ಕೊತ್ತಂಬರಿ ಸೊಪ್ಪಿನ ಚಿತ್ರಗಳನ್ನು ಹಾಕಲಾಗಿದ್ದರೂ, ಅವುಗಳನ್ನು ಪದಾರ್ಥಗಳ ಪಟ್ಟಿಯಲ್ಲಿ (Ingredients) ನಮೂದಿಸಿಲ್ಲ ಹಾಗೂ ವಿಟಮಿನ್ ಸಿ ಮತ್ತು ಇ ನಂತಹ ಪ್ರಮುಖ ಪೌಷ್ಟಿಕಾಂಶಗಳ ಮಾಹಿತಿಯನ್ನೂ ಅಪೂರ್ಣವಾಗಿ ನೀಡಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now