Dailyhunt Logo
  • Light mode
    Follow system
    Dark mode
    • Play Story
    • App Story
ತುಮರಿ, ಬ್ಯಾಕೋಡು ಭಾಗಗಳನ್ನು 'ಸಾಗರ ಗ್ರಾಮಾಂತರ ಠಾಣೆ'ಗೆ ಸೇರಿಸಿ: ಜಿ.ಟಿ ಸತ್ಯನಾರಾಯಣ ಕರೂರು ಆಗ್ರಹ

ತುಮರಿ, ಬ್ಯಾಕೋಡು ಭಾಗಗಳನ್ನು 'ಸಾಗರ ಗ್ರಾಮಾಂತರ ಠಾಣೆ'ಗೆ ಸೇರಿಸಿ: ಜಿ.ಟಿ ಸತ್ಯನಾರಾಯಣ ಕರೂರು ಆಗ್ರಹ

Kannada News Now 3 months ago

ಶಿವಮೊಗ್ಗ: ಸಾಗರ ತಾಲೂಕಿನ ಕರೂರು ಮತ್ತು ಬಾರಂಗಿ ಹೋಬಳಿ ಪ್ರದೇಶಗಳನ್ನು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮುಕ್ತಗೊಳಿಸಿ, ತಕ್ಷಣವೇ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಸೇರ್ಪಡೆಗೊಳಿಸಬೇಕು ಎಂದು ಕೆಡಿಪಿ ಸದಸ್ಯರು ಹಾಗೂ ತುಮರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಜಿ.ಟಿ.

ಸತ್ಯನಾರಾಯಣ ಕರೂರು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದ್ವೀಪದ ಹಳೇ ಭೌಗೋಳಿಕ ಹಿನ್ನೆಲೆ ಮತ್ತು ಅಂದಿನ ಅನಿವಾರ್ಯತೆ

ಕಳೆದ 70 ವರ್ಷಗಳಿಂದ ಕರೂರು ಹಾಗೂ ಬಾರಂಗಿ ಹೋಬಳಿಗಳು ದ್ವೀಪದ ಭೌಗೋಳಿಕ ಹಿನ್ನೆಲೆಯನ್ನು ಹೊಂದಿದ್ದವು. ಈ ಹಿಂದೆ ಕೇವಲ ಲಾಂಚ್‌ಗಳ ಮೂಲಕವೇ ಸಂಪರ್ಕ ಸಾಧಿಸಬೇಕಿದ್ದ ಕಾಲದಲ್ಲಿ, ನದಿಯ ಈಚೆಗಿನ ಭಾಗಗಳಿಗೆ ರಾತ್ರಿ ವೇಳೆಯಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾದರೂ ಕಾರ್ಗಲ್ ಪೊಲೀಸ್ ಠಾಣೆಯೇ ಹತ್ತಿರವಾಗುತ್ತಿತ್ತು. ಸಾಗರವು ಅತ್ಯಂತ ದೂರವಾಗುತ್ತಿದ್ದ ಕಾರಣದಿಂದಾಗಿ ಅಂದಿನ ಅಗತ್ಯಕ್ಕೆ ತಕ್ಕಂತೆ ತುಮರಿ ಮತ್ತು ಬ್ಯಾಕೋಡು ಭಾಗಗಳ ಎಫ್‌ಐಆರ್ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಕಾರ್ಗಲ್ ಪೊಲೀಸರ ನಿಯಂತ್ರಣಕ್ಕೆ ಒಪ್ಪಿಸಲಾಗಿತ್ತು. ಬ್ಯಾಕೋಡ್‌ನಲ್ಲಿ ಪೊಲೀಸ್ ಔಟ್‌ಪೋಸ್ಟ್ (OP) ವ್ಯವಸ್ಥೆ ಇತ್ತಾದರೂ, ಪೂರ್ಣ ಪ್ರಮಾಣದ ಠಾಣೆಯ ಮಂಜೂರಾತಿಗೆ ಎಫ್‌ಐಆರ್ ಸಂಖ್ಯೆ ಮತ್ತು ಜನಸಂಖ್ಯೆಯ ತಾಂತ್ರಿಕ ಮಾನದಂಡಗಳು ಅಡ್ಡಿಯಾಗಿದ್ದವು ಎಂದು ಹೇಳಿದ್ದಾರೆ.

ಸೇತುವೆ ನಿರ್ಮಾಣದ ಬಳಿಕ ಬದಲಾದ ಭೌಗೋಳಿಕ ಚಿತ್ರಣ

ಶರಾವತಿ ನದಿಗೆ ಹೊಸದಾಗಿ ಸೇತುವೆ ನಿರ್ಮಾಣವಾದ ಬಳಿಕ ಈ ಭಾಗದ ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಬದಲಾಗಿದೆ. ಪ್ರಸ್ತುತ ಸಾಗರ ನಗರದಿಂದ ತುಮರಿಗೆ ಕೇವಲ 45 ನಿಮಿಷಗಳಲ್ಲಿ ತಲುಪಬಹುದಾಗಿದೆ. ಮುಂಭಾಗದ ಸಂಕಣ್ಣ ಶಾನ್‌ಬೋಗು ಮುಂತಾದ ಕೊನೆಯ ಹಳ್ಳಿಗಳಿಗೂ ಒಂದೂವರೆ ಗಂಟೆಯ ಒಳಗಾಗಿ ತಲುಪಲು ಸಾಧ್ಯವಿದೆ. ಆದರೆ, ಪ್ರಸ್ತುತ ವ್ಯವಸ್ಥೆಯಡಿ ಕಾರ್ಗಲ್‌ನಿಂದ ತುಮರಿಗೆ ಬರಬೇಕಾದರೆ ಪೊಲೀಸರು ಕನಿಷ್ಠ ಎರಡೂವರೆ ಗಂಟೆಗಳ ಕಾಲ ದುರ್ಗಮ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಇದರಿಂದಾಗಿ ಸಮಯ, ಶ್ರಮ ಮತ್ತು ಇಂಧನ ವ್ಯರ್ಥವಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಕಾನೂನು ರಕ್ಷಣೆ ಸಿಗದಂತಾಗಿದೆ ಎಂದರು.

ಆಡಳಿತಾತ್ಮಕ ಹೊರೆ ಮತ್ತು ಸಾರ್ವಜನಿಕರ ಪರದಾಟ

ಪ್ರಸ್ತುತ ಕಾರ್ಗಲ್ ಪೊಲೀಸ್ ಠಾಣೆಯು ಸುಮಾರು 450 ಹಳ್ಳಿಗಳನ್ನು ಒಳಗೊಂಡಿದ್ದು, 100 ಕಿಲೋಮೀಟರ್‌ಗಿಂತಲೂ ದೀರ್ಘವಾದ ವ್ಯಾಪ್ತಿಯನ್ನು ಹೊಂದಿದೆ. ಇತ್ತೀಚೆಗೆ ಜೋಗ ಭಾಗವನ್ನು ಸಹ ಕಾರ್ಗಲ್ ಠಾಣೆಗೆ ಸೇರಿಸಿರುವುದರಿಂದ ಅಲ್ಲಿನ ಸಿಬ್ಬಂದಿಗೆ ಆಡಳಿತಾತ್ಮಕವಾಗಿ ಕೆಲಸದ ಒತ್ತಡ ವಿಪರೀತವಾಗಿದೆ. ಮತ್ತೊಂದೆಡೆ, ತುಮರಿ ಭಾಗದಲ್ಲಿ ಮರಣೋತ್ತರ ಪರೀಕ್ಷೆಯಂತಹ ತುರ್ತು ವೈದ್ಯಕೀಯ-ಕಾನೂನು ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಜನರು ಸಾಗರ ಉಪವಿಭಾಗೀಯ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದರೂ ಕಾರ್ಗಲ್ ಪೊಲೀಸರು ಬಂದು, ಮಹಜರು ನಡೆಸಿ, ತದನಂತರ ಸಾಗರ ಆಸ್ಪತ್ರೆಗೆ ಶವವನ್ನು ಸಾಗಿಸುವ ಪ್ರಕ್ರಿಯೆಯು ಅತ್ಯಂತ ಸುದೀರ್ಘ ಹಾಗೂ ಯಾತನಾಮಯವಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.

ವ್ಯಾಪ್ತಿ ಮರುಹಂಚಿಕೆಗೆ ವ್ಯಾಪಕ ಒತ್ತಾಯ

ಕಾರ್ಗಲ್ ಠಾಣೆಯ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರಲು ತುಮರಿ ಮತ್ತು ಬ್ಯಾಕೋಡು ಭಾಗಗಳನ್ನು ಕಾರ್ಗಲ್ ವ್ಯಾಪ್ತಿಯಿಂದ ಮುಕ್ತಗೊಳಿಸುವುದು ಅತ್ಯಗತ್ಯವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ತುಮರಿ, ಬ್ಯಾಕೋಡು ಒಳಗೊಂಡಂತೆ ಚನ್ನಗೊಂಡದವರೆಗಿನ ವ್ಯಾಪ್ತಿಯನ್ನು ತಕ್ಷಣವೇ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಒಳಪಡಿಸಬೇಕು ಎಂದು ಜಿ.ಟಿ. ಸತ್ಯನಾರಾಯಣ ಕರೂರು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿ, ಬ್ಯಾಕೋಡು ಸೇರಿದಂತೆ ಕೆಲ ಭಾಗಗಳನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಸೇರಿಸಿದರೇ, ಆ ಭಾಗದ ಜನರಿಗೆ ಕಾನೂನು ವ್ಯವಸ್ಥೆಗೆ ಅನುಕೂಲ ಆಗೋದು ಗ್ಯಾರಂಟಿ. ಸದ್ಯ ಕಾರ್ಗಲ್ ಠಾಣೆಗೆ ಸಿಗಂದೂರು ಸೇತುವೆಯ ಮೂಲಕ ಸಾಗರ ಬಂದು ಹೋಗುತ್ತಿರೋರೇ ಹೆಚ್ಚು. ಒಂದು ವೇಳೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಆ ಭಾಗಗಳನ್ನು ಸೇರಿಸಿದ್ದೇ ಆದಲ್ಲಿ, ತಮ್ಮ ಕಾನೂನು ತೊಡಕುಗಳನ್ನು ಬಗೆ ಹರಿಸಿಕೊಳ್ಳಲು ಸಾಗರದಲ್ಲೇ ಅವಕಾಶ ಸಿಕ್ಕಂತೆ ಆಗಲಿದೆ. ಆ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಸ್ಥಳೀಯ ಆಡಳಿತದ ಅಧಿಕಾರಿಗಳು ಕ್ರಮ ವಹಿಸಿ ಅನುಕೂಲ ಕಲ್ಪಿಸಿ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Dailyhunt
Disclaimer: This content has not been generated, created or edited by Dailyhunt. Publisher: Kannada News Now