ನವದೆಹಲಿ: ಯುಪಿಐ (UPI) ಮೂಲಕ ಹಣ ವರ್ಗಾವಣೆ ಮಾಡುವ ಸಾಮಾನ್ಯ ಗ್ರಾಹಕರಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಯುಪಿಐ ವಹಿವಾಟುಗಳು ಎಂದಿನಂತೆಯೇ ಸಂಪೂರ್ಣವಾಗಿ ಉಚಿತವಾಗಿರಲಿವೆ ಎಂದು ಸ್ಪಷ್ಟಪಡಿಸಿದೆ.
ವದಂತಿಗಳಿಗೆ ತೆರೆ ಎಳೆದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ಹೊಸ ಯುಪಿಐ ನಿಯಮಾವಳಿಗಳ ಅಡಿಯಲ್ಲಿ ಸಾಮಾನ್ಯ ಜನರಿಂದ ಡಿಜಿಟಲ್ ಪಾವತಿಗಳಿಗೆ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಕುರಿತು ಸಾರ್ವಜನಿಕರಲ್ಲಿ ಉಂಟಾಗಿದ್ದ ಗೊಂದಲವನ್ನು ಪರಿಹರಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಹಣಕಾಸು ಸೇವೆಗಳ ಇಲಾಖೆ (DFS) ಅಧಿಕೃತ ಮಾಹಿತಿ ಬಿಡುಗಡೆ ಮಾಡಿವೆ. ಸುಳ್ಳು ಸುದ್ದಿಗಳನ್ನು ತಿರಸ್ಕರಿಸಿ, ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಇಲಾಖೆ ಮನವಿ ಮಾಡಿದೆ.
ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ
ಸರ್ಕಾರ ನೀಡಿರುವ ಸ್ಪಷ್ಟನೆಯ ಪ್ರಕಾರ, ಹಣ ಪಾವತಿಸುವವರು, ಸ್ವೀಕರಿಸುವವರು ಹಾಗೂ ತಮ್ಮದೇ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುವ (Self-transfer) ಪ್ರಕ್ರಿಯೆಗಳು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿರಲಿವೆ. ಜೊತೆಗೆ, ಯುಪಿಐ ಆಯಪ್ ಸೇವೆ ಒದಗಿಸುವ ಸಂಸ್ಥೆಗಳು ಯುಪಿಐ ಮೂಲಕ ಮಾಡುವ ಯಾವುದೇ ವಹಿವಾಟಿಗೆ ಪ್ಲಾಟ್‌ಫಾರ್ಮ್ ಶುಲ್ಕ (Platform Fee) ಅಥವಾ ಇನ್ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಸೂಚಿಸಲಾಗಿದೆ.
ಉಚಿತ ಸೇವೆಗೆ ಎಂಡಿಆರ್ ನೀತಿಯೇ ರಕ್ಷಣೆ
ದೇಶದ ಪ್ರತಿಯೊಬ್ಬ ನಾಗರಿಕನಿಗೂ ಡಿಜಿಟಲ್ ಪಾವತಿ ಸೌಲಭ್ಯ ಸುಲಭವಾಗಿ ತಲುಪಬೇಕು ಎಂಬ ಉದ್ದೇಶದಿಂದ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ನೀತಿಯು ಯುಪಿಐ ಸೇವೆಗಳನ್ನು ಗ್ರಾಹಕರಿಗೆ ಸದಾ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತದೆ. ಹೀಗಾಗಿ ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಸಾಮಾನ್ಯ ಗ್ರಾಹಕರು ಎಂದಿನಂತೆ ಉಚಿತವಾಗಿ ಯುಪಿಐ ಸೇವೆಯನ್ನು ಬಳಸಬಹುದಾಗಿದೆ.

