Dailyhunt Logo
  • Light mode
    Follow system
    Dark mode
    • Play Story
    • App Story
ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕೋರ್ಟ್ ಕಲಾಪ ಸ್ಥಗಿತ, ತೀವ್ರ ಶೋಧ

ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕೋರ್ಟ್ ಕಲಾಪ ಸ್ಥಗಿತ, ತೀವ್ರ ಶೋಧ

Kannada News Now 1 week ago

ಯಾದಗಿರಿ: ಇಲ್ಲಿನ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಗುರುವಾರ ಅನಾಮಧೇಯ ಇ-ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದ್ದು, ಇಡೀ ಆವರಣದಲ್ಲಿ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ.

ಮಧ್ಯಾಹ್ನವೇ ಬಂದಿತ್ತು ಸ್ಫೋಟದ ಸಂದೇಶ

ನ್ಯಾಯಾಲಯದ ದೈನಂದಿನ ಕಲಾಪಗಳು ಎಂದಿನಂತೆ ಸಾಗುತ್ತಿದ್ದಾಗ, ಮಧ್ಯಾಹ್ನ ಸುಮಾರು 12 ಗಂಟೆಯ ಅವಧಿಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಅಧಿಕೃತ ಇ-ಮೇಲ್ ಖಾತೆಗೆ ಈ ಅನಾಮಧೇಯ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 1:30 ರಿಂದ 3 ಗಂಟೆಯ ಒಳಗೆ ನೂತನ ನ್ಯಾಯಾಲಯದ ಕಟ್ಟಡದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್‌ನಲ್ಲಿ ಎಚ್ಚರಿಸಲಾಗಿತ್ತು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್.ಎಸ್. ಪಾಟೀಲ ಅವರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶರು ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಧಾವಿಸಿದ ಶ್ವಾನದಳ, ನಿಷ್ಕ್ರಿಯ ದಳ

BREAKING : ಚಾಮರಾಜನಗರ, ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ | Bomb Threat

ಬೆದರಿಕೆ ಸಂದೇಶದ ಗಂಭೀರತೆಯನ್ನು ಅರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪೃಥ್ವಿಕ್ ಶಂಕರ್ ಅವರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ವಿಶೇಷ ಸಿಬ್ಬಂದಿಯನ್ನು ಕೋರ್ಟ್ ಆವರಣಕ್ಕೆ ರವಾನಿಸಿದರು. ಸುರಕ್ಷತೆಯ ದೃಷ್ಟಿಯಿಂದ ವಕೀಲರು, ಕಕ್ಷಿದಾರರು ಮತ್ತು ಕೋರ್ಟ್ ಸಿಬ್ಬಂದಿಯನ್ನು ತಕ್ಷಣವೇ ಕಟ್ಟಡದಿಂದ ಹೊರಗೆ ಕಳುಹಿಸಲಾಯಿತು. ತದನಂತರ ತಜ್ಞರ ತಂಡವು ನ್ಯಾಯಾಲಯದ ಪ್ರತಿಯೊಂದು ಸಭಾಂಗಣ, ನ್ಯಾಯಾಧೀಶರ ಕೊಠಡಿಗಳು, ಕಚೇರಿ ವಿಭಾಗಗಳು ಸೇರಿದಂತೆ ಇಡೀ ಆವರಣವನ್ನು ಇಂಚಿಂಚೂ ಜಾಲಾಡಿ ತಪಾಸಣೆ ನಡೆಸಿತು.

ಜಿಲ್ಲಾದ್ಯಂತ ಕಟ್ಟೆಚ್ಚರ, ಆತಂಕದ ವಾತಾವರಣ

ಈ ದಿಢೀರ್ ಬೆಳವಣಿಗೆಯಿಂದಾಗಿ ನ್ಯಾಯಾಲಯದ ಸಿಬ್ಬಂದಿ ಹಾಗೂ ಕಕ್ಷಿದಾರರಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಾ ನ್ಯಾಯಾಧೀಶರು ಕಲಾಪದಿಂದ ಹೊರಗುಳಿಯಬೇಕಾಯಿತು. ವಿಷಯದ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಪೃಥ್ವಿಕ್ ಶಂಕರ್ ಅವರು, ಇ-ಮೇಲ್ ಬಂದ ತಕ್ಷಣವೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇವಲ ಯಾದಗಿರಿ ಮಾತ್ರವಲ್ಲದೆ, ಜಿಲ್ಲೆಯ ಶಹಾಪುರ ಹಾಗೂ ಸುರಪುರ ತಾಲೂಕು ನ್ಯಾಯಾಲಯಗಳಲ್ಲೂ ಮುನ್ನೆಚ್ಚರಿಕೆಯಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಬೆದರಿಕೆ ಇ-ಮೇಲ್‌ನ ಮೂಲ ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now