ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮುಂಗಾರು ಪ್ರಾರಂಭವಾಗಿದ್ದು, ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳಂತಹ ಹೂಡಿಕೆಗಾಗಿ ರೈತ ತನ್ನ ಕೈಯಲ್ಲಿ ಸಾಕಷ್ಟು ಹಣ ಹೊಂದಿರಬೇಕು. ಇನ್ನು ರೈತರನ್ನ ರಕ್ಷಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿವೆ. ಅದರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯೂ ಒಂದು.
ಅನ್ನದಾತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹಾಗಿದ್ರೆ, ಈ ಕಾರ್ಡ್ ತೆಗೆದುಕೊಳ್ಳುವುದು ಹೇಗೆ.? ಸಾಲ ಪಡೆಯುವುದು ಹೇಗೆ.? ಅರ್ಹತೆಗಳೇನು.? ಅರ್ಜಿ ಸಲ್ಲಿಸುವುದು ಹೇಗೆ.? ವಿವರಗಳಿಗಾಗಿ ಮುಂದೆ ಓದಿ.
ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳೇನು.?
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ, ಕೇಂದ್ರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (KCC) ಯೋಜನೆಯನ್ನ ತಂದಿದೆ. ಇದನ್ನ ಮೊದಲು 1998ರಲ್ಲಿ ಪ್ರಾರಂಭಿಸಲಾಯಿತು. ಒಮ್ಮೆ ಕಿಸಾನ್ ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೆ, ಅದರ ಮಾನ್ಯತೆಯ ಅವಧಿ ಐದು ವರ್ಷಗಳು. ಈ ಐದು ವರ್ಷಗಳ ಅವಧಿಯಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತದೆ.
ಬಡ್ಡಿ ಎಷ್ಟು : ಇದರ ಮೇಲಿನ ಬಡ್ಡಿಯೂ ಶೇ.4ಕ್ಕಿಂತ ಕಮ್ಮಿಯಿದೆ. ಈ ಸಾಲ ಕೊಡುವ ಮುನ್ನ ರೈತನ ಆದಾಯ, ಹಿಂದಿನ ಸಾಲದ ಇತಿಹಾಸ, ಆತನಿಗೆ ಎಷ್ಟು ಕೃಷಿ ಭೂಮಿ ಇದೆ.? ಮುಂತಾದ ಅಂಶಗಳನ್ನು ಪರಿಗಣಿಸಿ ಎಷ್ಟು ಸಾಲ ನೀಡಬೇಕೆಂದು ನಿರ್ಧರಿಸಲಾಗುತ್ತದೆ. ವಾಸ್ತವವಾಗಿ ಬಡ್ಡಿ ದರವು ವಾರ್ಷಿಕ 7% ಆಗಿದೆ. ಆದ್ರೆ, ಪಡೆದ ಸಾಲವನ್ನ ವರ್ಷದೊಳಗೆ ಮರುಪಾವತಿ ಮಾಡುವ ರೈತರಿಗೆ ಶೇ.3ರಷ್ಟು ಬಡ್ಡಿ ದರ ಇಳಿಕೆಯಾಗಲಿದೆ. ಆದ್ದರಿಂದ, ಕಿಸಾನ್ ಕ್ರೆಡಿಟ್ ಕಾರ್ಡ್ ವಾರ್ಷಿಕ ಬಡ್ಡಿ ದರವು 4%ಕ್ಕಿಂತ ಹೆಚ್ಚಿಲ್ಲ.
ಯಾವ ಬ್ಯಾಂಕ್‌ಗಳು ನೀಡುತ್ತವೆ.?
ದೇಶದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತವೆ. ಸರ್ಕಾರಿ ಬ್ಯಾಂಕ್‌ಗಳ ಜೊತೆಗೆ ಖಾಸಗಿ ಬ್ಯಾಂಕ್‌ಗಳೂ ಈ ಸೇವೆಯನ್ನ ಒದಗಿಸುತ್ತಿವೆ. ಬ್ಯಾಂಕ್‌ಗಳಿಗೆ ಹೋಗಿ ಅಥವಾ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸುವ ಮೂಲಕ ಕಿಸಾನ್ ಕಾರ್ಡ್ ಪಡೆಯಲು ಸಾಧ್ಯವಿದೆ. ಭೂಮಾಲೀಕರಿಂದ ಹಿಡಿದು ಒಕ್ಕಲು ರೈತರವರೆಗೆ ಯಾರು ಬೇಕಾದರೂ ತೆಗೆದುಕೊಳ್ಳಬಹುದು.
ಕಿಸಾನ್ ಕಾರ್ಡ್ ಪಡೆಯುವುದು ಹೇಗೆ..?
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸುವವರು ಕೆಸಿಸಿ ಅರ್ಜಿ ನಮೂನೆಯನ್ನ ಭರ್ತಿ ಮಾಡಬೇಕು. ನೀವು ಯಾವುದೇ ಬ್ಯಾಂಕ್‌ನಿಂದ ಕಾರ್ಡ್ ಪಡೆಯಲು ಬಯಸಿರೆ, ನೀವು ಆ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು. ಗುರುತಿನ ಚೀಟಿಯಾಗಿ, ಆಧಾರ್ ಕಾರ್ಡ್/ ವೋಟರ್ ಐಡಿ/ ಡ್ರೈವಿಂಗ್ ಲೈಸೆನ್ಸ್/ ಪ್ಯಾನ್ ಕಾರ್ಡ್/ ಪಾಸ್‌ಪೋರ್ಟ್‌ಗಳಲ್ಲಿ ಒಂದನ್ನ ಸಲ್ಲಿಸಬೇಕು. ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಮೀನಿನ ದಾಖಲೆಗಳು, ಬ್ಯಾಂಕ್‌ಗೆ ಅಗತ್ಯವಿರುವ ಇತರ ದಾಖಲೆಗಳು.
ಅರ್ಜಿ ಸಲ್ಲಿಸುವುದು ಹೇಗೆ..?
ನೀವು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಆಯಾ ಬ್ಯಾಂಕ್‌ನ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ಮುಖಪುಟದಲ್ಲಿ, ಸಾಲದ ಆಯ್ಕೆಯನ್ನ ಆರಿಸಿ ಮತ್ತು "KCC" ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿನ ಮಾಹಿತಿಯನ್ನ ಸಂಪೂರ್ಣವಾಗಿ ಓದಿ ಕೇಳಿದ ಮಾಹಿತಿ ನೀಡಿ. ಎಲ್ಲವೂ ಮುಗಿದ ನಂತ್ರ ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಈಗ ನೀವು ಅರ್ಜಿ ಸಲ್ಲಿಸಿದಂತೆ ನೀವು ಉಲ್ಲೇಖ ಸಂಖ್ಯೆಯನ್ನ ಪಡೆಯುತ್ತೀರಿ. ಕಾರ್ಡ್‌ನ ಸ್ಥಿತಿಯನ್ನ ತಿಳಿಯಲು ಈ ಸಂಖ್ಯೆ ಉಪಯುಕ್ತವಾಗಿದೆ.
ಕೆಸಿಸಿ ಕ್ರೆಡಿಟ್ ಮಿತಿ ಹೆಚ್ಚಿಸಬಹುದೇ..?
ಐದು ವರ್ಷಗಳವರೆಗೆ ಮಾನ್ಯವಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬ್ಯಾಂಕುಗಳು 3 ಲಕ್ಷ ಸಾಲವನ್ನ ನೀಡುತ್ತವೆ. ನೀವು ಈ ಮಿತಿಯನ್ನ ಹೆಚ್ಚಿಸಲು ಬಯಸಿದರೆ, ಅದು ಮೊದಲ ಬಾರಿಗೆ ಸಾಧ್ಯವಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ನಿಮ್ಮ CIBIL ಸ್ಕೋರ್ ಹೆಚ್ಚಿಸಿಕೊಳ್ಳಬೇಕು. ಈ ಮೂಲಕ ಬ್ಯಾಂಕ್ ಗಳ ವಿಶ್ವಾಸ ಗಳಿಸಿದರೆ ಹೆಚ್ಚಿನ ಸಾಲ ಪಡೆಯಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನ ಡ್ರಾ ಮಾಡಬಹುದೇ.?
ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ನಗದು ಹಿಂಪಡೆಯುವ ಸೌಲಭ್ಯವೂ ಲಭ್ಯವಿದೆ. ಕೃಷಿ ಉಪಕರಣಗಳನ್ನ ಖರೀದಿಸಲು ಕಾರ್ಡ್‌ನಿಂದ ಹಣವನ್ನ ಹಿಂಪಡೆಯಲು ಸಹ ಸಾಧ್ಯವಿದೆ. ಈ ಕಾರ್ಡ್ ಹೊಂದಿರುವ ರೈತರು ಸಾಲ ಸೌಲಭ್ಯದ ಜೊತೆಗೆ ಬೆಳೆ ವಿಮೆಯನ್ನೂ ಪಡೆಯುತ್ತಾರೆ.

