
ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಜತೆ ಚರ್ಚಿಸಿದ್ದು, ಏಪ್ರಿಲ್ 20ರವರೆಗೆ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದ್ದರಿಂದ ಒಂದು ವಾರ ಕಾಲ ಕಾದು ನೋಡಿ ಏಪ್ರಿಲ್ 20ರಂದು ಮತ್ತೊಮ್ಮೆ ಸಭೆ ಸೇರಿ ಮತ್ತೊಮ್ಮೆ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದರು.
ರಾಜ್ಯದ ನೆರೆಹೊರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕು ದಾಖಲೆ ಸಂಖ್ಯೆಯಲ್ಲಿ ಏರಿಕೆ ಆಗಿದ್ದರೂ ನಮ್ಮ ರಾಜ್ಯದ ಪರಿಸ್ಥಿತಿ ಬೇರೆ ಇದೆ.
ಆದ್ದರಿಂದ ಪರಿಸ್ಥಿತಿ ಗಮನಿಸಿ ತೀರ್ಮಾನಿಸಲು ಉದ್ದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.