ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಹಿಂದೆ ಬಿದ್ದ ವಿವಾಹಿತ ಮದುವೆ ಆಗುವಂತೆ ಮೂರು ವರ್ಷದಿಂದ ಹಿಂದೆ ಬಿದ್ದಿದ್ದ. ಅಷ್ಟಾದರೂ ಯುವತಿ ಮದುವೆಗೆ ಒಪ್ಪದ ಕಾರಣ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಲಿಂಗಧೀರ ಮಲ್ಲಸಂಸ್ರ ಹಾಗೂ ಗೆದ್ದಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಯುವತಿಯನ್ನು ಕೊಂದ ವಿವಾಹಿತ ನಿರ್ಜನ ಪ್ರದೇಶದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಂಕೋಲಾ ಮೂಲದ ಉಷಾ (25) ಕೊಲೆಯಾಗಿರುವ ದುರ್ದೈವಿ. ತಮಿಳುನಾಡು ಮೂಲದ ಗೋಪಾಲಕೃಷ್ಣ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಗೋಪಾಲಕೃಷ್ಣ ಕಳೆದ ಹಲವು ವರ್ಷಗಳಿಂದ ತನ್ನ ಕಂಪನಿಯಲ್ಲೆ ಕೆಲಸ ಮಾಡ್ತಿದ್ದ ಉಷಾಳನ್ನ ಪ್ರೀತಿಸುತ್ತಿದ್ದ. ಹೀಗಾಗಿ ಆ ಕಂಪನಿಯಲ್ಲಿ ಕೆಲಸವನ್ನು ಬಿಟ್ಟ ಯುವತಿ ಬೇರೆ ಕಂಪನಿಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೂ ಬಿಡದ ಭಗ್ನಪ್ರೇಮಿ ಮದುವೆಯಾಗುವಂತೆ ಪಿಡಿಸುತ್ತಿದ್ದ. ಯುವತಿ ನಿರಾಕರಿಸಿದ್ದರಿಂದ ಕುಪಿತಗೊಂಡ ಗೋಪಾಲಕೃಷ್ಣ ಇಂದು ಮುಂಜಾನೆ ಯುವತಿ ವಾಸವಿದ್ದ ಲಿಂಗದೀರ ಮಲ್ಲಸಂದ್ರ ಗ್ರಾಮದ ಯುವತಿ ಮನೆಗೆ ಹೋಗಿ ಉಸಿರುಗಟ್ಟಿಸಿ ಆಕೆಯನ್ನ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಗೋಪಾಲಕೃಷ್ಣ ತಾನು ವಾಸವಿದ್ದ ಗೆದ್ದಲಾಪುರ ಗ್ರಾಮಕ್ಕೆ ಬಂದು ಮನೆಯಲ್ಲಿದ್ದ ವಿಷದ ಬಾಟಲು ಹಿಡಿದು ಗ್ರಾಮದ ಕೆರೆಗೆ ತೆರಳಿದ್ದಾನೆ. ಇನ್ನೂ ವಿಷವನ್ನ ಸೇವಿಸಿ ತಾನು ಕೂಡ ಕೆರೆಯ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಯುವತಿಯ ಕೊಲೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಕೊಲೆಯಾದ ಉಷಾ ಮೊಬೈಲ್ ಕೊನೆಯ ಡಯಲ್ ನಂಬರ್ ಲೊಕೇಷನ್ ಹಾಕಿಕೊಂಡು ಗೆದ್ದಲಾಪುರ ಗ್ರಾಮದ ಕೆರೆ ಆವರಣದಲ್ಲಿ ಬಂದು ನೋಡಿದಾಗ ಗೋಪಾಲಕೃಷ್ಣನೇ ಕೊಲೆ ಮಾಡಿ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಇನ್ನೂ ಗೋಪಾಲಕೃಷ್ಣನಿಗೆ ಈಗಾಗಲೇ ಈ ಹಿಂದೆಯೇ ಮದುವೆಯಾಗಿದ್ದು ಪತ್ನಿ ಸಾವನ್ನಪ್ಪಿದ್ದಾಳೆ. ನಂತರ ಗೆದ್ದಲಾಪುರ ಗ್ರಾಮದ ಚಿಕ್ಕಮ್ಮನ ಮನೆಯಲ್ಲಿ ಬಂದು ವಾಸವಿದ್ದು ಖಾಸಗಿ ಕಂಪನಿಗೆ ಕೆಲಸ ಹೋಗ್ತಿದ್ದ ಎಂದು ತಿಳಿದು ಬಂದಿದೆ.
ಯುವತಿಯ ಕೊಲೆ ಹಾಗೂ ಕೊಲೆಯ ನಂತರ ಪ್ರೇಮಿಯ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

