Dailyhunt
ಬೆಂಗಳೂರಿನಲ್ಲಿ ನೆಲೆಸಿದ್ದ 272 ಅಕ್ರಮ ವಲಸಿಗರು ಗಡೀಪಾರು!

ಬೆಂಗಳೂರಿನಲ್ಲಿ ನೆಲೆಸಿದ್ದ 272 ಅಕ್ರಮ ವಲಸಿಗರು ಗಡೀಪಾರು!

Kannadavahini 2 weeks ago

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 272 ವಲಸಿಗರನ್ನು ಗಡೀಪಾರು ಮಾಡಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಅಕ್ರಮ ವಲಸಿರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದ್ದು, ಇದುವರೆಗೆ 178 ಪುರುಷರು, 94 ಮಹಿಳೆಯರ ಸಹಿತ ಒಟ್ಟು 272 ಜನ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲಾಗಿದೆ.

ಪತ್ತೆ ಹಚ್ಚಲಾದ ಅಕ್ರಮ ವಲಸಿಗರನ್ನು ಬಿಗಿ ಭದ್ರತೆಯೊಂದಿಗೆ ತ್ರಿಪುರಾದ ಗಡಿಯವರೆಗೆ ಕರೆದೊಯ್ದು, ಭದ್ರತಾ ಪಡೆಯ ಸಹಕಾರದೊಂದಿಗೆ ಗಡಿ ದಾಟಿಸುವ ಕಾರ್ಯ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಪ್ರಜೆಗಳನ್ನು ಭಾರತಕ್ಕೆ ಅಕ್ರಮವಾಗಿ ಕರೆತರುತ್ತಿದ್ದ ಜಾಲದ ಇಬ್ಬರು ಏಜೆಂಟ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ವಲಸಿಗರ ಹಿಂದೆ ವ್ಯವಸ್ಥಿತವಾದ ಮೂರು ಹಂತದ ಜಾಲ ಕೆಲಸ ಮಾಡುತ್ತಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಮೊದಲು ಬಾಂಗ್ಲಾದೇಶದ ಪ್ರಜೆಗಳನ್ನು ಒಬ್ಬ ಏಜೆಂಟ್ ಭಾರತದ ಗಡಿಯವರೆಗೆ ಕರೆತಂದರೆ, ಗಡಿ ಭಾಗದಲ್ಲಿರುವ ಎರಡನೇ ಏಜೆಂಟ್ ಕಾನೂನುಬಾಹಿರವಾಗಿ ಗಡಿ ದಾಟಿಸಿ ಭಾರತದ ಒಳಕ್ಕೆ ತಂದು ಬಿಡುತ್ತಿದ್ದ.

ಕನ್ನಡ ಭಾಷೆಯ ಕೆಲವೊಂದು ಶಬ್ಧಗಳನ್ನು ಹೇಳಿಕೊಟ್ಟು, ನಕಲಿ ಐಡಿ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಬಳಿಕ ದೇಶದ ಬೇರೆ ಬೇರೆ ಭಾಗಗಳಲ್ಲಿ ಉದ್ಯೋಗ ಕೊಡಿಸಲಾಗುತ್ತಿತ್ತು. ಈ ವ್ಯವಸ್ಥಿತ ಜಾಲದ ಮೂಲಕ ವಲಸಿಗರು ನಗರದ ಹೋಟೆಲ್, ಗ್ಯಾರೇಜ್ ಹಾಗೂ ಕಟ್ಟಡ ನಿರ್ಮಾಣದಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಬಂಧಿತ ಏಜೆಂಟ್‌ಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪತ್ತೆಯಾಗಿದ್ದ 432 ಜನ ಅಕ್ರಮ ವಲಸಿಗರು: ಕಳೆದ ಮೂರು ವರ್ಷಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಅಕ್ರಮವಾಗಿ ರಾಜ್ಯದಲ್ಲಿ ನೆಲೆಯೂರಿದ್ದ 432 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿತ್ತು. ಈ ಪೈಕಿ 255 ಮಂದಿಯನ್ನು ಪೊಲೀಸ್ ಇಲಾಖೆ ಗಡಿಪಾರು ಮಾಡಿತ್ತು.

ನಗರದ ಹೊರವಲಯದಲ್ಲಿ ಅಕ್ರಮವಾಗಿ ನೆಲೆಸಿದ್ದ 53 ಮಂದಿ ಬಾಂಗ್ಲಾದೇಶಿಯರನ್ನು ಕೆಲ ತಿಂಗಳ ಹಿಂದೆ ಪೊಲೀಸರು ಪತ್ತೆ ಹಚ್ಚಿದ್ದರು. ಅನಧಿಕೃವಾಗಿ ರಾಜಧಾನಿಯಲ್ಲಿ ಬಾಂಗ್ಲಾ ನುಸುಳುಕೋರರ ವಿರುದ್ಧ ವಿಳಂಬವಾಗಿ ಕ್ರಮ ಕೈಗೊಂಡಿರುವ ಬಗ್ಗೆ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿತ್ತು. ಈ ಬೆನ್ನಲ್ಲೇ, ಬಾಂಗ್ಲಾದೇಶ ಸೇರಿ ವಿವಿಧ ದೇಶಗಳಿಂದ ಬಂದು ರಾಜ್ಯದಲ್ಲಿ ಬೀಡುಬಿಟ್ಟಿದ್ದ ಅಕ್ರಮ ವಲಸಿಗರ ಪತ್ತೆ, ಗಡಿಪಾರು ಹಾಗೂ ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಪೊಲೀಸ್ ಇಲಾಖೆ ಮಾಹಿತಿ ನೀಡಿತ್ತು.

ಕಳೆದ ಮೂರು ವರ್ಷಗಳಲ್ಲಿ 432 ಅಕ್ರಮ ವಲಸಿಗರನ್ನು ಪತ್ತೆ ಮಾಡಲಾಗಿದೆ. ಇದರ ಪೈಕಿ 370 ಮಂದಿ ಬಾಂಗ್ಲಾದೇಶದವರಾಗಿದ್ದಾರೆ. ಅಲ್ಲದೆ, ಪಾಕಿಸ್ತಾನದ 16 ಹಾಗೂ ಶ್ರೀಲಂಕಾದ 42 ಮಂದಿ ಇದ್ದಾರೆ. ಮೂರು ವರ್ಷಗಳಲ್ಲಿ 255 ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Kannadavahini