Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದಲ್ಲಿ ತಂಬಾಕಿನಿಂದ ಯುವಕರಲ್ಲಿ ಮಾರಕ ಕ್ಯಾನ್ಸರ್ ಹೆಚ್ಚಳ

ಭಾರತದಲ್ಲಿ ತಂಬಾಕಿನಿಂದ ಯುವಕರಲ್ಲಿ ಮಾರಕ ಕ್ಯಾನ್ಸರ್ ಹೆಚ್ಚಳ

Kannadavahini 2 days ago

ಬೆಂಗಳೂರು:ತಂಬಾಕು ಸೇವನೆಯು ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಭಾರತದಲ್ಲಿ ಅನ್ನನಾಳ, ಹೊಟ್ಟೆ, ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡ, ಮೂತ್ರಕೋಶ ಮತ್ತು ಯಕೃತ್ತಿನ ಕ್ಯಾನ್ಸರ್ ರೋಗಗಳಿಗೆ ಈ ತಂಬಾಕು ಸೇವನೆ ಪ್ರಮುಖ ಕಾರಣವಾಗಿದ್ದು, ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎಂದು ಕ್ಯಾನ್ಸರ್ ರೋಗ ತಜ್ಞರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವ ತಂಬಾಕು ಮುಕ್ತ ದಿನಾಚರಣೆ ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರಿನ ಸಂಪ್ರದ ಹಾಸ್ಪಿಟಲ್ ನ ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತದಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್ ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಹೆಚ್ಚು ಬೆಳಕಿಗೆ ಬಾರದ ಹೊರೆಯ ಬಗ್ಗೆ ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇಂದು ತಂಬಾಕು ಸುಮಾರು 25-30 ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತಿದೆ ಮತ್ತು ಯುವ ಭಾರತೀಯರಲ್ಲಿ ಈ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ತಂಬಾಕು ಸೇವನೆಯಿಂದ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಲ್ಲದೇ, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಗಳು ಈಗ ಹೆಚ್ಚಾಗುತ್ತಿವೆ. ಇದು ಧೂಮಪಾನ ಮತ್ತು ಹೊಗೆ ರಹಿತ ತಂಬಾಕು ಸೇವೆನೆಯಿಂದ ಉಂಟಾಗುತ್ತದೆ ಎಂಬುದನ್ನು ವೈದ್ಯರು ಹೇಳಿದ್ದಾರೆ.

ತಂಬಾಕು ಬಳಕೆಯಿಂದಾಗಿ ಚಿಕ್ಕ ವಯೋಮಾನದವರಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಹೇಳಿರುವ ತಜ್ಞರು, ಈ ಪೈಕಿ 16 ವರ್ಷದ ಬಾಲಕನೊಬ್ಬ ತಂಬಾಕು ಸೇವನೆಯಿಂದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಗೆ ತುತ್ತಾಗಿರುವುದು ಪತ್ತೆಯಾಗಿದೆ ಎಂಬ ಆಘಾತಕಾರಿ ಪ್ರಕರಣವನ್ನೂ ಹಂಚಿಕೊಂಡಿದ್ದಾರೆ.

ಜಾಗತಿಕ ಕ್ಯಾನ್ಸರ್ ಸಂಶೋಧನೆಯ ಪ್ರಕಾರ, ಪ್ರಪಂಚದಾದ್ಯಂತದ ಎಲ್ಲಾ ಕ್ಯಾನ್ಸರ್ ಸಾವುಗಳ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಈ ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ್ ನಿಂದ ಸಂಭವಿಸುತ್ತಿವೆ. ಭಾರತದಲ್ಲಿ ವಿಶ್ವದ ಅತಿ ಹೆಚ್ಚು ತಂಬಾಕು ಬಳಕೆ ಮಾಡಲಾಗುತ್ತಿದೆ ಮತ್ತು ಇದರಿಂದ ಹೆಚ್ಚಿನ ಹೊರೆಯನ್ನೂ ಹೊರುತ್ತಿದೆ. ವಿಶೇಷವಾಗಿ ಹೊಗೆ ರಹಿತ ಅಂದರೆ ಬರೀ ತಂಬಾಕನ್ನು ಸೇವನೆ ಮಾಡುವುದರಿಂದ ತಲೆ ಮತ್ತು ಬಾಯಿ ಹಾಗೂ ಕುತ್ತಿಗೆ ಕ್ಯಾನ್ಸರ್ ಅಪಾಯಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಅಂಶವಾಗಿದೆ.

ಬೆಂಗಳೂರಿನ ಸಂಪ್ರದ ಹಾಸ್ಪಿಟಲ್ ನ ಸಂಸ್ಥಾಪಕ, ವೈದ್ಯಕೀಯ ನಿರ್ದೇಶಕ ಮತ್ತು ಮೆಡಿಕಲ್ ಆಂಕಾಲಾಜಿ, ಹೆಮೆಟೋಲಾಜಿ & ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಶನ್ ಘಟಕದ ಮುಖ್ಯಸ್ಥರಾಗಿರುವ ಡಾ.ರಾಧೇಶ್ಯಾಂ ನಾಯಕ್ ಅವರು ಮಾತನಾಡಿ, "ತಂಬಾಕು ಕೇವಲ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಮಾತ್ರವಲ್ಲದೇ ತಂಬಾಕು ಸೇವನೆಗೆ ನೇರವಾಗಿ ಸಂಬಂಧಿಸಿರುವ ಅನ್ನನಾಳ, ಮೇದೋಜ್ಜೀರಕ ಗ್ರಂಥಿ, ಮೂತ್ರಕೋಶ, ಹೊಟ್ಟೆ ಮತ್ತು ಯಕೃತ್ತಿನ ಕ್ಯಾನ್ಸರ್ ಗಳ ಹೆಚ್ಚುತ್ತಿರುವ ಹೊರೆಯನ್ನು ನಾವು ಗಮನಿಸುತ್ತಿದ್ದೇವೆ. ಈ ಕ್ಯಾನ್ಸರ್ ಗಳಲ್ಲಿ ಹಲವು ತಡವಾಗಿ ಪತ್ತೆಯಾಗುತ್ತವೆ ಮತ್ತು ಅವು ಅತ್ಯಂತ ಗಂಭೀರ ಸ್ವರೂಪಕ್ಕೆ ಹೋಗಿರುತ್ತವೆ. ವಿಶೇಷವಾಗಿ ಆತಂಕಕಾರಿ ಸಂಗತಿಯೆಂದರೆ, ತಂಬಾಕು ಸೇವನೆಯು ಜೀವನದ ಆರಂಭದಲ್ಲಿಯೇ ಆರಂಭವಾಗುವುದರಿಂದ ರೋಗಗಳು ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ'' ಎಂದು ಹೇಳಿದ್ದಾರೆ.

"ನಾವು ಇತ್ತೀಚೆಗೆ ಕೇವಲ 16 ವರ್ಷ ವಯಸ್ಸಿನ ರೋಗಿಗೆ ತಂಬಾಕು ಸೇವನೆಯಿಂದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಿದ್ದೇವೆ./ ಇದು ಕುಟುಂಬಗಳು, ಶಾಲೆಗಳು ಮತ್ತು ನೀತಿ ನಿರೂಪಕರಿಗೆ ಒಂದು ಎಚ್ಚರಿಕೆಯ ಕರೆಗಂಟೆಯಾಗಬೇಕು. ಯುವಕರಲ್ಲಿ ತಂಬಾಕು ಸೇವನೆಯು ಗಂಭೀರ ಕ್ಯಾನ್ಸರ್ ರೋಗಕ್ಕೆ ಅಪಾಯವಾಗುತ್ತಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು'' ಎಂದು ಅವರು ಕಿವಿಮಾತು ಹೇಳಿದರು.
ತಂಬಾಕಿನಿಂದ ಬರುವ ಕ್ಯಾನ್ಸರ್ ಹೆಚ್ಚಾಗಿ ಜೈವಿಕವಾಗಿ ಹೆಚ್ಚು ಆಕ್ರಮಣಕಾರಿ ಮತ್ತು ಚಿಕಿತ್ಸೆ ನೀಡಲಾರದಷ್ಟು ಗಂಭೀರ ಸ್ಥಿತಿಯಲ್ಲಿರುವುದನ್ನು ತಜ್ಞರು ಗಮನಿಸಿದ್ದಾರೆ.

ಬೆಂಗಳೂರಿನ ಸಂಪ್ರದ ಹಾಸ್ಪಿಟಲ್ ನ ಕ್ಯಾನ್ಸರ್ ಪ್ರಿವೆನ್ಶನ್ & ಪ್ರಿವೆಂಟಿವ್ ಆಂಕಾಲಾಜಿಯ ಕನ್ಸಲ್ಟೆಂಟ್ ಡಾ.ವಿನೋದ್ ರಮಣಿ ಅವರು ಮಾತನಾಡಿ, "ತಂಬಾಕು ಬಳಸುವವರು ಚಿಕಿತ್ಸೆಯ ತೊಡಕುಗಳು, ಚಿಕಿತ್ಸೆಯ ವೈಫಲ್ಯ, ಅದರ ಮರುಕಳಿಸುವಿಕೆ ಮತ್ತು ಎರಡನೇ ಕ್ಯಾನ್ಸರ್ ಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಅಂಶವನ್ನು ತಿಳಿದುಕೊಳ್ಳಬೇಕು. ಧೂಮಪಾನವು ಶಸ್ತ್ರಚಿಕಿತ್ಸೆಯ ನಂತರ ಗಾಯ ಗುಣವಾಗುವುದನ್ನು ನಿಧಾನಗೊಳಿಸುತ್ತದೆ. ಸೋಂಕಿನ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ತಂಬಾಕಿಗೆ ಸಂಬಂಧಿಸದ ಕ್ಯಾನ್ಸರ್ ಗಳಿಗೆ ಹೋಲಿಸಿದರೆ ಫಲಿತಾಂಶಗಳು ಗಣನೀಯ ಪ್ರಮಾಣದಲ್ಲಿ ಕೆಟ್ಟ ಸ್ಥಿತಿಯಲ್ಲಿರುತ್ತವೆ'' ಎಂದು ಎಚ್ಚರಿಸಿದರು.
ತಂಬಾಕು ಶ್ವಾಸಕೋಶಗಳಿಗಿಂತ ಹೆಚ್ಚು ಹಾನಿ ಉಂಟು ಮಾಡುತ್ತದೆ ಎಂದು ತಜ್ಞರು ಪ್ರಮುಖವಾಗಿ ಎಚ್ಚರಿಕೆ ನೀಡುತ್ತಾರೆ.

RGUHS ನ ವಿಶ್ರಾಂತ ಉಪಕುಲಪತಿ ಮತ್ತು ಕಿದ್ವಾಯಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಆಂಕೋಲಾಜಿಯ ಮಾಜಿ ನಿರ್ದೇಶಕ ಡಾ.ಪಿ.ಎಸ್.ಪ್ರಭಾಕರನ್ ಮಾತನಾಡಿ, "ತಂಬಾಕು ಹೃದಯ ಮತ್ತು ರಕ್ತನಾಳಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಸೆರೆಬ್ರಲ್ ತೊಡಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಈಗಾಗಲೇ ಹಾನಿಗೊಳಗಾದ ಈ ವ್ಯವಸ್ಥೆಗೆ ಕ್ಯಾನ್ಸರ್ ಚಿಕಿತ್ಸೆಯನ್ನು ಕೊಟ್ಟಾಗ ಅಪಾಯಗಳ ಮಟ್ಟ ಇನ್ನೂ ಹೆಚ್ಚಾಗುತ್ತದೆ'' ಎಂದು ಹೇಳಿದರು.

ತಂಬಾಕಿನ "ಸುರಕ್ಷಿತ ಮಿತಿಗಳ'' ಬಗ್ಗೆ ತಪ್ಪು ಕಲ್ಪನೆಗಳು ಇದರ ವ್ಯಸನ ಮತ್ತು ವಿಳಂಬ ಅಥವಾ ತಡವಾಗಿ ರೋಗವನ್ನು ಪತ್ತೆ ಮಾಡಲು ಕಾರಣವಾಗುತ್ತವೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ತಂಬಾಕು ನಿಯಂತ್ರಣ ತಜ್ಞರಾದ ಡಾ.ಕೆ.ಪ್ರಭಾಕರ ರಾವ್ ಅವರು ಮಾತನಾಡಿ, "ಪರಿಣಾಮಕಾರಿಯಾಗಿ ತಂಬಾಕು ಸೇವನೆ ಮಾಡುವ ಯಾವುದೇ ಶಿಫಾರಸುಗಳಿಲ್ಲ. ಅಲ್ಲದೇ, ಇಂತಿಷ್ಟೇ ಸೇವಿಸಿದರೆ ಅಪಾಯ ಇರುವುದಿಲ್ಲ ಎಂಬ ಸುರಕ್ಷಿತ ಮಟ್ಟವೂ ಇಲ್ಲ. ತಂಬಾಕು ಬಳಕೆ ಆರಂಭವಾದಾಗಲೇ ಅಪಾಯವು ಆರಂಭವಾಗುತ್ತದೆ. ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೆ ಅದನ್ನು ಬಳಸುತ್ತಾನೆ ಎಂಬುದರ ಮೇಲೆ ಅಪಾಯದ ತೀವ್ರತೆ ಅವಲಂಬಿತವಾಗಿರುತ್ತದೆ. ಯುವಕರು ಬೇಗನೇ ತಂಬಾಕು ಸೇವನೆ, ಧೂಮಪಾನ ಅಥವಾ ತಂಬಾಕು ಜಗಿಯುವುದನ್ನು ಆರಂಭಿಸಿದರೆ ಜೀವಿತಾವಧಿಯ ಕ್ಯಾನ್ಸರ್ ನ ಅಪಾಯ ಹೆಚ್ಚಾಗುತ್ತದೆ'' ಎಂದು ತಿಳಿಸಿದರು.

ಭಾರತದಲ್ಲಿ ವಿವಿಧ ತಂಬಾಕು ಸಂಬಂಧೀತ ಕ್ಯಾನ್ಸರ್ ಗಳ ಹೆಚ್ಚುತ್ತಿರುವ ಹೊರೆಗಳ ಬಗ್ಗೆ ವೈದ್ಯರು ಹಲವು ಪ್ರಕರಣಗಳನ್ನು ವಿವರಿಸಿದ್ದಾರೆ. ಇವು ಹೆಚ್ಚಾಗಿ ಸಾರ್ವಜನಿಕರ ಗಮನಸೆಳೆಯುವುದಿಲ್ಲ. ಇವುಗಳಲ್ಲಿ ಅನ್ನನಾಳದ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್, ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ ಮತ್ತು ತಲೆ,ಕುತ್ತಿಗೆ ಕ್ಯಾನ್ಸರ್ ಗಳು ಸೇರಿವೆ ಎಂದು ಅವರು ಹೇಳಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್ ಮಾತ್ರವಲ್ಲದೇ, ತಂಬಾಕು ಸಂಬಂಧಿತ ರೋಗಗಳ ಮೇಲೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕಾಗಿದೆ. ಇದಕ್ಕೆ ಪ್ರಮುಖವಾಗಿ ಆರಂಭಿಕ ಹಂತದಲ್ಲಿಯೇ ತಪಾಸಣೆ, ತಂಬಾಕು ನಿಯಂತ್ರಣವನ್ನು ಜರೂರಾಗಿ ಮಾಡುವುದು ಮತ್ತು ಯುವ ಸಮುದಾಯದಲ್ಲಿ ಇದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಶ್ವಾಸಕೋಶದ ರೋಗವನ್ನು ತಪ್ಪಿಸಿದರೆ, ತಂಬಾಕು ಸೇವನೆಯನ್ನು ಹೇಗಾದರೂ ನಿಭಾಯಿಸಬಹುದು ಎಂದು ಅನೇಕ ರೋಗಿಗಳು ಭಾವಿಸಿದ್ದಾರೆ. ಆದರೆ, ಇಂತಹ ಭಾವನೆ ತಪ್ಪು. ತಂಬಾಕು ಬಹುತೇಕ ಪ್ರತಿಯೊಂದು ಅಂಗವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರುತ್ತದೆ ಮತ್ತು ಡಜನ್ ಗಟ್ಟಲೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಮಾರಕ ಕ್ಯಾನ್ಸರ್ ಗಳನ್ನು ತಡೆಗಟ್ಟಬೇಕಾದರೆ ನಮಗಿರುವ ಒಂದೇ ಅಸ್ತ್ರವೆಂದರೆ ಅದು ತಂಬಾಕು ಸೇವನೆಯನ್ನು ತ್ಯಜಿಸುವುದು ಮತ್ತು ಅದನ್ನು ನಿಯಂತ್ರಿಸುವುದಾಗಿದೆ'' ಎಂದು ರಾಧೇಶ್ಯಾಂ ಹೇಳುತ್ತಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini