ಖಾಸಗಿ ಜಾಗದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಸೇರಿದಂತೆ 12 ಕುಟುಂಬಗಳಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ಟಿ.ನರಸೀಪುರದಲ್ಲಿ ಬಹಿಷ್ಕಾರ ಹಾಕಲಾಗಿದೆ.
ಟಿ ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ 12 ಕುಟುಂಬಗಳು ತಮಗಾದ ಅನ್ಯಾಯ ಪ್ರಶ್ನಿಸಿದ್ದಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿವೆ.
ಬಹಿಷ್ಕಾರಕ್ಕೆ ಒಳಾಗಿರುವ ಕುಟುಂಬ ಸದಸ್ಯರನ್ನು ಯಾರೂ ಮಾತನಾಡಿಸುವಂತಿಲ್ಲ. ಶುಭ ಸಮಾರಂಭಗಳಿಗೆ ಆಹ್ವಾನಿಸುವಂತಿಲ್ಲ, ನೆರವು ನೀಡುವಂತಿಲ್ಲ. ಬಹಿಷ್ಕಾರಕ್ಕೊಳಗಾದವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಬಹಿಷ್ಕಾರಕ್ಕೆ ಒಳಗಾದ ಕುಟುಂಬದವರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ತಮ್ಮ ಜಾಗದಲ್ಲಿ ವಾಲ್ಮೀಕಿ ಭವನ ಕಟ್ಟಲು ಮುಂದಾಗಿದ್ದಕ್ಕೆ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ. ಪ್ರಶ್ನೆ ಮಾಡಿದರೆ ಪರಿಹಾರ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದು ಇದೀಗ ಪರಿಹಾರವೂ ಇಲ್ಲ ಜಾಗವು ನಿಮ್ಮದಲ್ಲ ಎಂದು ವಾದ ಮಾಡುತ್ತಿದ್ದಾರೆ. ಅದಲ್ಲದೇ ಬಹಿಷ್ಕಾರ ಕೂಡ ವಿಧಿಸಿದ್ದಾರೆ ಎಂದು ಹೇಳಿದ್ದಾರೆ.

