ಮೊಬೈಲ್ ಟವರ್ ಗಳಿಗೆ ಅಳವಡಿಸಲಾಗಿದ್ದ ಚಿಪ್ ಕದಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಬೆಂಗಳೂರಿನ ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಗಂಗಾಧರ್ ಎಂಬಾತನನ್ನು ಬಂಧಿಸಿರುವ ಪೊಲೀಸರು, 25 ಲಕ್ಷ ರೂಪಾಯಿ ಮೌಲ್ಯದ 19 ಮೊಬೈಲ್ ಟವರ್ ಚಿಪ್ ವಶಕ್ಕೆ ಪಡೆದಿದ್ದಾರೆ.
ಗಂಗಾಧರ್ ಮೊಬೈಲ್ ಟವರ್ ಗಳಿಗೆ ಹೋಗಿ ಬೆಲೆಬಾಳುವ ಚಿಪ್ ಗಳನ್ನ ಕಳ್ಳತನ ಮಾಡ್ತಿದ್ದ. ಈ ಬಗ್ಗೆ ಮೊಬೈಲ್ ಕಂಪನಿಯವರು ಪೀಣ್ಯ ಠಾಣೆಗೆ ದೂರನ್ನು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಗಂಗಾಧರ್ ಬಂಧನವಾಗಿದೆ.
ಐಟಿಐ ಓದಿದ್ದ ಗಂಗಾಧರ್ ಎಲೆಕ್ಟ್ರಾನಿಕ್ ವಸ್ತುಗಳ ಮಾರಿ ಹಣ ಮಾಡಲು ತಂತ್ರ ಹೂಡಿದ್ದ. ಕೊರೊನಾ ಕಾಲದಲ್ಲಿ ಆತನನ್ನು ಕಂಪನಿಯಿಂದ ಗೇಟ್ ಪಾಸ್ ನೀಡಲಾಗಿತ್ತು. ಕೆಲಸದಿಂದ ಆಚೆ ಹಾಕಿದ ಕಂಪನಿಯಿಂದಲೇ ಕಳ್ಳತನ ಮಾಡಿದ್ದ. ಬೆಂಗಳೂರು ಸೇರಿದಂತೆ ಒಟ್ಟು 9 ಪ್ರಕರಣ ಪತ್ತೆಯಾಗಿದೆ. ಪೀಣ್ಯ ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.

