Dailyhunt Logo
  • Light mode
    Follow system
    Dark mode
    • Play Story
    • App Story
ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

Kannadavahini 1 week ago

ಬೆಂಗಳೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್​ಟಿಸಿ) ಸಿಬ್ಬಂದಿ ಟ್ರೇಡ್ ಯೂನಿಯನ್​ಗಳ ಜಂಟಿ ಕ್ರಿಯಾ ಸಮಿತಿಯು ಇಂದು ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರವನ್ನು ಹೈಕೋರ್ಟ್ ನಿರ್ಬಂಧಿಸಿದೆ.

ಹೈಕೋರ್ಟ್ ರಾಜ್ಯಾದ್ಯಂತ ನಡೆಸಲು ನಿರ್ಧರಿಸಿದ್ದ ಬಸ್ ಮುಷ್ಕರಕ್ಕೆ ಹೈಕೋರ್ಟ್ ತಡೆ ನೀಡಿ ಹೊರಡಿಸಿದ ಆದೇಶದಿಂದ ಸರ್ಕಾರಿ ಬಸ್ ಸಂಚಾರ ಎಂದಿನಂತಿರಲಿದ್ದು,ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಕೆಎಸ್‌ಆರ್​ಟಿಸಿ ಯ ಸಿಬ್ಬಂದಿ ಟ್ರೇಡ್ ಯೂನಿಯನ್​ಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿ ಮನೆ ಕೆಲಸ ಮಾಡುತ್ತಿರುವ ಸಿ.ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಹೆಚ್.ವಿ.ಶ್ರೀಧರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ಸೂರಜ್ ಗೋವಿಂದರಾಜು ಮತ್ತು ನ್ಯಾಯಮೂರ್ತಿ ಕೆ.ಮನ್ಮದಾ ರಾವ್ ಅವರಿದ್ದ ನ್ಯಾಯಪೀಠವು ಈ‌ ಸೂಚನೆ ನೀಡಿದೆ.

ಸರ್ಕಾರ ಈಗಾಗಲೇ ಶೇ 12.5ರಷ್ಟು ವೇತನ ಹೆಚ್ಚಿಸಿರುವ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಸೂಕ್ತವಲ್ಲ. ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನೌಕರರ ಸಂಘಕ್ಕೆ ನ್ಯಾಯಪೀಠ ಸೂಚನೆ ನೀಡಿತು.

ಸಾರಿಗೆ ನೌಕರರ ಸಂಘ, ಸಾರಿಗೆ ಸಚಿವರು, ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ‌ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಯಾವಾಗ ಸಭೆ ನಡೆಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ‌ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಗುರುವಾರ (ಮೇ‌ 21)ಕ್ಕೆ ಹೈಕೋರ್ಟ್ ಮುಂದೂಡಿದೆ.

ಸಂಘದ ಪ್ರತಿನಿಧಿಗಳು, ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ನಡುವಿನ ಸಭೆ ಯಾವಾಗ ನಡೆಯಬಹುದು ಎಂಬ ಬಗ್ಗೆ ಸೂಚನೆ ಪಡೆಯಲು ಹೆಚ್ಚುವರಿ ಎರಡು ದಿನಗಳ ಕಾಲಾವಕಾಶ ಬೇಕು ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.

ಬಾಕಿ ವೇತನ ಪಾವತಿ ಹಾಗೂ ವೇತನ ಹೆಚ್ಚಳದ ಬೇಡಿಕೆ ಈಡೇರದಿದ್ದರೆ ಮೇ 20ರಿಂದ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಕಾರ್ಮಿಕ ಸಂಘಗಳು ಎಚ್ಚರಿಕೆ ನೀಡಿದ್ದವು.
ಈ ಮುಷ್ಕರದಿಂದ ದಿನಗೂಲಿ ಕಾರ್ಮಿಕರು, ರೋಗಿಗಳು, ವೃದ್ಧರು, ಅಂಗವಿಕಲರು ಹಾಗೂ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿತವಾಗಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಅರ್ಜಿದಾರರು ವಾದಿಸಿದರು.

ಪ್ರಸ್ತುತ ನಡೆಯುತ್ತಿರುವ 10ನೇ ತರಗತಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳ ಮೇಲೂ ಮುಷ್ಕರದ ಪರಿಣಾಮ ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಮೇ 18ರಂದು ಆರಂಭವಾದ ಪರೀಕ್ಷೆಗಳು ಮೇ 25ರವರೆಗೆ ನಡೆಯಲಿದ್ದು, ಗ್ರಾಮೀಣ ಮತ್ತು ಅರೆನಗರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕೆಎಸ್ ಆರ್ ಟಿಸಿ ಬಸ್‌ಗಳನ್ನೇ ಅವಲಂಬಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಕೆಕೆಆರ್ ಟಿಸಿ ಸಂಸ್ಥೆಗಳನ್ನು ಜೂನ್ 30ರವರೆಗೆ "ಸಾರ್ವಜನಿಕ ಉಪಯೋಗ ಸೇವೆಗಳು" ಎಂದು ಘೋಷಿಸಿತ್ತು. ಈ ಅವಧಿಯಲ್ಲಿ ಇಂತಹ ಸೇವಾ ಸಂಸ್ಥೆಗಳು ಮುಷ್ಕರ ನಡೆಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಪ್ರಾಥಮಿಕ ವಾದಗಳನ್ನು ಆಲಿಸಿದ ಬಳಿಕ, ನ್ಯಾಯಾಲಯ ಮುಷ್ಕರಕ್ಕೆ ತಾತ್ಕಾಲಿಕ ತಡೆ ನೀಡಿದ್ದು, ಸಾರಿಗೆ ಸಂಘಗಳೊಂದಿಗೆ ಮಾತುಕತೆ ನಡೆಸಲು ದಿನಾಂಕ ನಿಗದಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದರು. ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರನಾಥ ಪೂಜಾರಿ ಹಾಜರಿದ್ದರು. ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಕೆಕೆಆರ್ ಟಿಸಿ ಪರ ವಕೀಲ ಹೆಚ್ ಆರ್ ರೇಣುಕ ಹಾಜರಿದ್ದರು. ಕೆಎಸ್ ಆರ್ ಟಿಸಿ ನೌಕರರ ಟ್ರೇಡ್ ಯೂನಿಯನ್ ಜಂಟಿ ಕ್ರಿಯಾ ಸಮಿತಿಯ ಪರ ವಕೀಲರಾದ ಲಿಪ್ಟಾನ್ ರೊಸರಿಯೊ ಮತ್ತು ಕ್ಲಿಫ್ಟಾನ್ ರೊಸಾರಿಯೊ ವಾದ ಮಂಡಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Kannadavahini