Dailyhunt Logo
  • Light mode
    Follow system
    Dark mode
    • Play Story
    • App Story
ದಾಖಲೆ ಬಿಡುಗಡೆ ಮಾಡಿದ HDK - ಕಾಂಗ್ರೆಸ್ ಗೆ ದೊಡ್ಡ ಆಘಾತ?

ದಾಖಲೆ ಬಿಡುಗಡೆ ಮಾಡಿದ HDK - ಕಾಂಗ್ರೆಸ್ ಗೆ ದೊಡ್ಡ ಆಘಾತ?

Karnataka TV 3 weeks ago

ರಾಜ್ಯದ ಆಡಳಿತ ವ್ಯವಸ್ಥೆ ಹಾಗೂ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ಅಂದರೆ ಕೆಪಿಎಸ್‌ಸಿ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ನಿರುದ್ಯೋಗಿ ಯುವಕರ ನಂಬಿಕೆ ಸಂಪೂರ್ಣವಾಗಿ ಕುಸಿಯುತ್ತಿದೆ. ಅರ್ಹತೆ ಮತ್ತು ಪಾರದರ್ಶಕತೆಯ ಬದಲು ಜಾತಿ ಹಾಗೂ ಹಣದ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. KPSCಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ಹೇಳುವ ಮೊದಲು ಗೃಹ ಸಚಿವರು ತಮ್ಮದೇ ಇಲಾಖೆಯಲ್ಲಿ ನಡೆದಿರುವುದನ್ನು ಗಮನಿಸಲಿ ಎಂದು ಅವರು ತಿರುಗೇಟು ನೀಡಿದ್ದಾರೆ.

ಪಶು ವೈದ್ಯಕೀಯ ಇಲಾಖೆ ನೇಮಕಾತಿ ಅಕ್ರಮದ ತನಿಖೆಗೆ ED ಪ್ರವೇಶಿಸಿರುವ ವಿಚಾರವನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕುರಿತಾಗಿ ಪ್ರಿಯಾಂಕ್ ಖರ್ಗೆ ನೀಡಿದ ಒಂದಕ್ಕೊಂದು ತಾಳೆಯಾಗದ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಆಗಸ್ಟ್ 23ರಂದು ಅಧಿಕಾರಿ ತಂದೆಯ ಅನಾರೋಗ್ಯದ ಕಾರಣ ತೆರಳಿದ್ದಾರೆ ಎಂದಿದ್ದ ಗೃಹ ಸಚಿವರು, ಆಗಸ್ಟ್ 25ರಂದು ಅಧಿಕಾರಿ ಎಲ್ಲಿದ್ದಾರೆಂದೇ ಗೊತ್ತಿಲ್ಲ ಎಂದಿರುವುದು ಹೇಗೆ? ಗೊತ್ತಿಲ್ಲ ಎಂದ ಮೇಲೆ ಇಲಾಖೆಯನ್ನು ಹೇಗೆ ನಿರ್ವಹಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ನಡೆದ 24 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. OMR ಶೀಟ್‌ಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಗೆ ಆಗ್ರಹವಿದ್ದರೂ, ತರಾತುರಿಯಲ್ಲಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿ ನೇಮಕಾತಿ ಆದೇಶ ನೀಡಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ದಾಖಲೆಗಳಲ್ಲಿ ತಿದ್ದುಪಡಿ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದಿದ್ದಾರೆ.

ಅಧಿಕಾರ ಕೊಟ್ಟರೆ ಕೆಪಿಎಸ್‌ಸಿ ಹಾಗೂ ಕೆಎಟಿ ರದ್ದು ಮಾಡುವುದಾಗಿ ಹೇಳುವ ಪ್ರಿಯಾಂಕ್ ಖರ್ಗೆ, ಮೊದಲು ತಮ್ಮ ಆಡಳಿತದಲ್ಲಿನ ಅಕ್ರಮಗಳಿಗೆ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಜೊತೆಗೆ 'ನೇಮಕಾತಿ ಪ್ರಕ್ರಿಯೆಗಳಲ್ಲೇ ಇಂತಹ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತೆ ಎಂದು ಎಚ್ಚರಿಸಿರುವ ಅವರು, ವಿವಾದಿತ ನೇಮಕಾತಿಗಳ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Karnataka TV