Dailyhunt Logo
  • Light mode
    Follow system
    Dark mode
    • Play Story
    • App Story
Hubli: ಮಾಂಜಾ ದಾರಕ್ಕೆ ಮತ್ತೊಂದು ಬಲಿ..! ತಾಯಿ ಕಳೆದುಕೊಂಡ ಮಕ್ಕಳ ಕಣ್ಣೀರು..!

Hubli: ಮಾಂಜಾ ದಾರಕ್ಕೆ ಮತ್ತೊಂದು ಬಲಿ..! ತಾಯಿ ಕಳೆದುಕೊಂಡ ಮಕ್ಕಳ ಕಣ್ಣೀರು..!

Karnataka TV 4 hrs ago

Hubli: ಹಬ್ಬದ ಸಂಭ್ರಮಕ್ಕೆ ಹಾರುವ ಗಾಳಿಪಟದ ದಾರಕ್ಕೆ ಮತ್ತೊಂದು ಜೀವ ಬಲಿಯಾಗಿದೆ..! ಹುಬ್ಬಳ್ಳಿಯಲ್ಲಿ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ 38 ವರ್ಷದ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ದಾರುಣ ಸಾವು ಸಂಭವಿಸಿದೆ.

ಇಬ್ಬರು ಮಕ್ಕಳ ತಾಯಿಯಾಗಿದ್ದ ವಿದ್ಯಾ ಮಂಜುನಾಥ ಗೌಡರ ಅವರ ಅಕಾಲಿಕ ಸಾವು ಕುಟುಂಬವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಘಟನೆ ಬೆನ್ನಲ್ಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಮಾಂಜಾ ದಾರ ಬಳಸುವವರು ಮತ್ತು ಮಾರಾಟ ಮಾಡುವವರಿಗೆ ಕ್ರಿಮಿನಲ್ ಕೇಸ್ ಎಚ್ಚರಿಕೆ ನೀಡಿದೆ. ಇತ್ತ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮಾಂಜಾ ದಾರದ ಬಳಕೆಗೆ ಸಂಪೂರ್ಣ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

ಇದು ಗಾಳಿಪಟದ ದಾರವಲ್ಲ, ಜೀವಕ್ಕೆ ಕುತ್ತು ತಂದ ಮಾರಕ ದಾರ..! ಹುಬ್ಬಳ್ಳಿಯ ಭರತ್ ನಗರದ ನಿವಾಸಿ ವಿದ್ಯಾ ಮಂಜುನಾಥ ಗೌಡರ, ವಯಸ್ಸು 38. ವೃತ್ತಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ವಿದ್ಯಾ, ಎಂದಿನಂತೆ ಮನೆಯಿಂದ ಕೆಲಸಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಆದರೆ ಶಿವಶಂಕರ ಕಾಲೋನಿ ಬಳಿ ಮಧ್ಯಾಹ್ನ ಸುಮಾರು 1 ಗಂಟೆಗೆ ಕುತ್ತಿಗೆಗೆ ಸಿಲುಕಿದ ಮಾಂಜಾ ದಾರ, ಅವರ ಬದುಕನ್ನೇ ಕಸಿದುಕೊಂಡಿದೆ.

ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ವಿದ್ಯಾ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಮನೆಯವರಿಗಾಗಿ ದುಡಿಯಲು ಹೊರಟಿದ್ದ ಮಹಿಳೆ, ಮನೆಗೆ ಮರಳಲೇ ಇಲ್ಲ. ಇಬ್ಬರು ಮಕ್ಕಳನ್ನು ಅಗಲಿದ ತಾಯಿಯ ಸಾವು ಕುಟುಂಬಕ್ಕೆ ಆಘಾತ ನೀಡಿದೆ.

ಕೆಲಸದ ನಿಮಿತ್ತ ವಿದ್ಯಾ ಅವರು ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರು. ಎಂದಿನಂತೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಕ್ಕಳಿರುವ ಕುಟುಂಬಕ್ಕೆ ತುಂಬಾ ನೋವಾಗಿದೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಮಾಂಜಾ ದಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

ಒಂದು ಕ್ಷಣದ ನಿರ್ಲಕ್ಷ್ಯ, ಒಂದು ಮಾರಕ ದಾರ..! ಆದರೆ ಅದರ ಪರಿಣಾಮ ಮಾತ್ರ ಒಂದು ಕುಟುಂಬದ ಬದುಕಿನ ಮೇಲೆಯೇ ಬಿದ್ದಿದೆ. ಗಾಳಿಪಟ ಹಾರಿಸುವ ಸಂಭ್ರಮದ ಹಿಂದೆ ಇಂತಹ ಜೀವಹಾನಿ ಅಡಗಿರುವುದು ಆತಂಕಕಾರಿ. ಇತ್ತೀಚೆಗಷ್ಟೇ ಮಾಂಜಾ ದಾರದಿಂದ ಮಹಿಳೆಯೊಬ್ಬರಿಗೆ ಅಪಘಾತ ಸಂಭವಿಸಿದ ಘಟನೆ ನಡೆದಿತ್ತು. ಇದೀಗ ಮತ್ತೊಂದು ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ನಿಷೇಧವಿದ್ದರೂ ಈ ಮಾರಕ ದಾರ ಜನರ ಕೈಗೆ ಹೇಗೆ ಸಿಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ.

ಘಟನೆ ಬಳಿಕ ಹುಬ್ಬಳ್ಳಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿ ಮೃತದೇಹ ಪರಿಶೀಲಿಸಿದ್ದಾರೆ. ಕುಟುಂಬಸ್ಥರಿಂದ ಮಾಹಿತಿ ಪಡೆದ ಆಯುಕ್ತರು, ಮಾಂಜಾ ದಾರ ಬಳಸುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾಂಜಾ ದಾರ ಬಳಸುವವರನ್ನು ಪತ್ತೆಹಚ್ಚುತ್ತೇವೆ. ಯಾವುದೇ ಕಾರಣಕ್ಕೂ ಗಾಳಿಪಟ ಹಾರಿಸಲು ಮಾಂಜಾ ದಾರ ಬಳಸಬಾರದು. ಬಳಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಮಾಂಜಾ ದಾರ ಮಾರಾಟ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ಇತ್ತ ಮೃತ ವಿದ್ಯಾ ಅವರ ಅಂತಿಮ ದರ್ಶನ ಪಡೆದ ಶಾಸಕ ಮಹೇಶ್ ಟೆಂಗಿನಕಾಯಿ, ಮಾಂಜಾ ದಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಷೇಧವಿದ್ದರೂ ಮಾಂಜಾ ದಾರ ಜನರ ಕೈಗೆ ಹೇಗೆ ಸಿಗುತ್ತಿದೆ ಎಂದು ಪ್ರಶ್ನಿಸಿರುವ ಅವರು, ಕೇವಲ ಒಂದೆರಡು ಕಡೆ ಪರಿಶೀಲನೆ ನಡೆಸಿದರೆ ಸಾಲದು, ರಾಜ್ಯದಲ್ಲಿ ಇದರ ಬಳಕೆಯನ್ನೇ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಾಂಜಾ ದಾರದಿಂದ ಹಲವಾರು ಜೀವಹಾನಿಯಾಗಿದೆ. ಇದು ದುರ್ದೈವದ ಸಾವು. ಒಂದು ಮಾಂಜಾ ದಾರ ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಈ ಕೂಡಲೇ ಪೊಲೀಸರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಾಂಜಾ ದಾರ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿ ಬಂಧಿಸಬೇಕು. ನಿಷೇಧವಿದ್ದರೂ ಈ ದಾರ ಜನರ ಕೈಗೆ ಹೇಗೆ ಸಿಗುತ್ತಿದೆ? ಸಂಪೂರ್ಣವಾಗಿ ಇದರ ಬಳಕೆಯನ್ನು ನಿಲ್ಲಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.

ಒಂದೆಡೆ ತಾಯಿಯನ್ನು ಕಳೆದುಕೊಂಡ ಮಕ್ಕಳ ನೋವು, ಮತ್ತೊಂದೆಡೆ ಮಾರಕ ಮಾಂಜಾ ದಾರಕ್ಕೆ ಕಡಿವಾಣ ಹಾಕಬೇಕೆಂಬ ಸಾರ್ವಜನಿಕರ ಆಗ್ರಹ. ಪೊಲೀಸ್ ಇಲಾಖೆ ಕ್ರಿಮಿನಲ್ ಪ್ರಕರಣಗಳ ಎಚ್ಚರಿಕೆ ನೀಡಿದೆ. ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಎಚ್ಚರಿಕೆ ಮತ್ತು ಭರವಸೆಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ, ಮಾಂಜಾ ದಾರದ ಮಾರಾಟ ಹಾಗೂ ಬಳಕೆಗೆ ಪರಿಣಾಮಕಾರಿ ಕಡಿವಾಣ ಬೀಳಬೇಕಿದೆ.

ಗಾಳಿಪಟ ಆಕಾಶದಲ್ಲಿ ಹಾರಲಿ, ಆದರೆ ಅದರ ದಾರ ಯಾರದೋ ಮನೆಯ ದೀಪ ಆರಿಸಬಾರದು..! ವಿದ್ಯಾ ಅವರ ಸಾವು ಮತ್ತೊಂದು ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಮಾಂಜಾ ದಾರದ ಮಾರಾಟ ಮತ್ತು ಬಳಕೆಯನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈಗಲಾದರೂ ಕಠಿಣ ಕ್ರಮ ಕೈಗೊಳ್ಳಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV