Dailyhunt Logo
  • Light mode
    Follow system
    Dark mode
    • Play Story
    • App Story
ಕನಿಷ್ಠ ವೇತನ ಹೆಚ್ಚಳಕ್ಕೆ ವಿಳಂಬ ಏಕೆ? ಸರ್ಕಾರದ ವಿರುದ್ಧ ಎಐಯುಟಿಯುಸಿ ಕಿಡಿ.!

ಕನಿಷ್ಠ ವೇತನ ಹೆಚ್ಚಳಕ್ಕೆ ವಿಳಂಬ ಏಕೆ? ಸರ್ಕಾರದ ವಿರುದ್ಧ ಎಐಯುಟಿಯುಸಿ ಕಿಡಿ.!

Karnataka TV 1 week ago

ಬೆಂಗಳೂರು: ಕನಿಷ್ಠ ವೇತನ ಹೆಚ್ಚಳದ ಆದೇಶವನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಕಾರ್ಮಿಕರಿಗೆ ಮಾಡಿದ ದೊಡ್ಡ ಅನ್ಯಾಯ ಎಂದು ಎಐಯುಟಿಯುಸಿ (AIUTUC) ರಾಜ್ಯ ಮುಖಂಡ ಕೆ.ಎನ್. ವೇಣುಗೋಪಾಲ್ ಭಟ್ ಆರೋಪಿಸಿದರು.

ಕರ್ನಾಟಕ ಟಿವಿ ಯೋಟ್ಟಿಗೆ ಮಾತನಾಡಿದ ಅವರು, ಮೇ 22ರಂದು ಕಾರ್ಮಿಕ ಇಲಾಖೆ ಕನಿಷ್ಠ ವೇತನ ಹೆಚ್ಚಳದ ಅಂತಿಮ ಅಧಿಸೂಚನೆ ಹೊರಡಿಸಿತ್ತು.

ಅದರಂತೆ ಬೆಂಗಳೂರಿನ ಹೊರಗುತ್ತಿಗೆ ನೌಕರರು, ಗುತ್ತಿಗೆ ಕಾರ್ಮಿಕರು ಹಾಗೂ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ₹28,000 ವೇತನ ನೀಡುವ ಪ್ರಸ್ತಾವನೆ ಜಾರಿಯಾಗಿತ್ತು ಎಂದು ಹೇಳಿದರು.

ಕರ್ನಾಟಕವನ್ನು ಗ್ರೇಟರ್ ಬೆಂಗಳೂರು ಪ್ರದೇಶ, ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳು ಎಂಬ ಮೂರು ವಲಯಗಳಾಗಿ ವಿಂಗಡಿಸಿ ವೇತನ ನಿಗದಿ ಮಾಡಲಾಗಿದೆ. ಸುಮಾರು ಏಳು ವರ್ಷಗಳ ಬಳಿಕ ಈ ಕನಿಷ್ಠ ವೇತನ ಹೆಚ್ಚಳ ಜಾರಿಯಾಗಿರುವುದು ಕಾರ್ಮಿಕರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ ಎಂದು ಅವರು ತಿಳಿಸಿದರು.

ಈ ವೇತನ ಹೆಚ್ಚಳದ ಕುರಿತು ಕಾರ್ಮಿಕ ಇಲಾಖೆ ಮಾಲೀಕರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಹಲವು ತ್ರಿಪಕ್ಷೀಯ ಸಭೆಗಳನ್ನು ನಡೆಸಿ ಅಂತಿಮ ನಿರ್ಧಾರ ಕೈಗೊಂಡಿತ್ತು. ಬೆಲೆ ಏರಿಕೆ, ಕಾರ್ಮಿಕರ ದುಡಿಮೆ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಆಧರಿಸಿ ಈ ಹೆಚ್ಚಳವನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಜೂನ್ ತಿಂಗಳ ವೇತನದಲ್ಲಿ ಹೆಚ್ಚಳದ ಮೊತ್ತವನ್ನು ಹಲವೆಡೆ ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಲಾಗಿದೆ. ಮೇ 22ರಿಂದ ಅಧಿಸೂಚನೆ ಜಾರಿಯಾಗಿದ್ದ ಕಾರಣ ಕೆಲವು ಸಂಸ್ಥೆಗಳು ಎಂಟು ದಿನಗಳ ಹೆಚ್ಚುವರಿ ವೇತನವನ್ನೂ ಪಾವತಿಸಿವೆ. ಆದರೆ ಇದೀಗ ಆರ್ಥಿಕ ಇಲಾಖೆ ಹೊರಡಿಸಿರುವ ಟಿಪ್ಪಣಿಯ ಹಿನ್ನೆಲೆಯಲ್ಲಿ ಜುಲೈ ತಿಂಗಳ ಪರಿಷ್ಕೃತ ವೇತನ ಕಾರ್ಮಿಕರ ಖಾತೆಗೆ ಜಮೆಯಾಗಿಲ್ಲ ಎಂದು ಅವರು ಆರೋಪಿಸಿದರು.

ಕನಿಷ್ಠ ವೇತನದಲ್ಲಿ ಸುಮಾರು 60 ಶೇಕಡಾ ಹೆಚ್ಚಳವಾಗಿರುವುದರಿಂದ ಕೈಗಾರಿಕೆಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತದೆ ಹಾಗೂ ಕೆಲವು ಕೈಗಾರಿಕೆಗಳು ರಾಜ್ಯದಿಂದ ಹೊರ ಹೋಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಮಾಲೀಕರ ವಲಯ ವ್ಯಕ್ತಪಡಿಸಿದೆ. ಇದೇ ವೇಳೆ, ಸರ್ಕಾರಿ ಇಲಾಖೆಗಳಲ್ಲಿನ ಹೊರಗುತ್ತಿಗೆ ನೌಕರರ ವೇತನ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಸುಮಾರು ₹3,700 ಕೋಟಿ ಹೆಚ್ಚುವರಿ ಹೊರೆ ಉಂಟಾಗಲಿದೆ ಎಂದು ಆರ್ಥಿಕ ಇಲಾಖೆ ಟಿಪ್ಪಣಿ ನೀಡಿದೆ ಎಂದು ಅವರು ಹೇಳಿದರು.

ಈ ಕಾರಣಗಳನ್ನು ಮುಂದಿಟ್ಟುಕೊಂಡು ವೇತನ ಪಾವತಿಯನ್ನು ತಡೆಹಿಡಿಯುವುದು ಸರಿಯಲ್ಲ. ಕಾರ್ಮಿಕರಿಗೆ ಸರ್ಕಾರ ನೀಡಿರುವ ಕನಿಷ್ಠ ವೇತನ ಹೆಚ್ಚಳವನ್ನು ಯಾವುದೇ ವಿಳಂಬವಿಲ್ಲದೆ ಸಂಪೂರ್ಣವಾಗಿ ಜಾರಿಗೆ ತರಬೇಕು. ಇಲ್ಲವಾದರೆ ರಾಜ್ಯ ಸರ್ಕಾರ ಕಾರ್ಮಿಕರಿಗೆ ಮಾಡಿದ ದ್ರೋಹವಾಗಲಿದೆ ಎಂದು ಕೆ.ಎನ್. ವೇಣುಗೋಪಾಲ್ ಭಟ್ ಎಚ್ಚರಿಕೆ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Karnataka TV