Dailyhunt Logo
  • Light mode
    Follow system
    Dark mode
    • Play Story
    • App Story
ಸಿದ್ದು ಮನೆಗೆ ಬಿಜೆಪಿ ನಾಯಕರು - ಭೇಟಿ ರಹಸ್ಯ ಬಯಲು!

ಸಿದ್ದು ಮನೆಗೆ ಬಿಜೆಪಿ ನಾಯಕರು - ಭೇಟಿ ರಹಸ್ಯ ಬಯಲು!

Karnataka TV 2 weeks ago

ರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೆ ಅಚ್ಚರಿಯ ಹಾಗೂ ಕುತೂಹಲಕರ ಬೆಳವಣಿಗೆಗಳು ನಡೆಯುತ್ತಿವೆ. ಸಂಪುಟ ಸರ್ಜರಿಯ ಚರ್ಚೆಗಳ ನಡುವೆಯೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಬಿಜೆಪಿ ನಾಯಕರು ಸಾಲು ಸಾಲಾಗಿ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕಳೆದ 24 ಗಂಟೆಗಳಲ್ಲಿ ಬಿಜೆಪಿಯ ಪ್ರಮುಖ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ವಿಶೇಷ. ಬುಧವಾರ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಲಕಾಲ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಗುರುವಾರ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿ ಮಾಜಿ ಶಾಸಕ ನರಸಿಂಹ ನಾಯಕ ಅಲಿಯಾಸ್ ರಾಜುಗೌಡ ಕೂಡ ಕಾವೇರಿ ನಿವಾಸಕ್ಕೆ ತೆರಳಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

ವಿಶೇಷವಾಗಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಲ್ಲಿ ಗಟ್ಟಿಯಾಗಿ ಮುಂದುವರಿಯಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜಾರಕಿಹೊಳಿ, ಸದ್ಯ ಬಿಜೆಪಿಯ ರೆಬೆಲ್ ಬಣದ ಪ್ರಮುಖರಾಗಿರುವುದು ಗಮನಾರ್ಹ.

ಇನ್ನು ಸಿದ್ದರಾಮಯ್ಯ ಅವರ ಬಹುಕಾಲದ ಅಭಿಮಾನಿ ಎಂದೇ ಹೇಳಿಕೊಳ್ಳುವ ಮಾಜಿ ಶಾಸಕ ರಾಜುಗೌಡ ಕೂಡ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಅವರು, ಇದೊಂದು ಕೇವಲ ವೈಯಕ್ತಿಕ ಭೇಟಿ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ವಿರೋಧ ಪಕ್ಷದ ನಾಯಕರು ಪದೇ ಪದೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಹಾಗೂ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಸದ್ಯ 'ರಾಜ್ಯ ರಾಜಕಾರಣದಲ್ಲಿ ದಿಢೀರ್ ಬದಲಾವಣೆಗಳ ಸುಳಿವೋ ಅಥವಾ ಬರೀ ಸೌಹಾರ್ದ ಭೇಟಿಯೋ ಎಂಬುದು ಸದ್ಯದ ಕುತೂಹಲ. ಈ ರಾಜಕೀಯ ಭೇಟಿಗಳು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬುದನ್ನ ಕಾದುನೋಡಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV