Dailyhunt Logo
  • Light mode
    Follow system
    Dark mode
    • Play Story
    • App Story
ತಾಯಿ ಬೈದಿದ್ದಕ್ಕೆ ಮಕ್ಕಳ ದುಡುಕಿನ ನಿರ್ಧಾರ?

ತಾಯಿ ಬೈದಿದ್ದಕ್ಕೆ ಮಕ್ಕಳ ದುಡುಕಿನ ನಿರ್ಧಾರ?

Karnataka TV 6 days ago

ತಾಯಿ ಬೈದಿದ್ದಕ್ಕೆ ಮನನೊಂದು ಇಬ್ಬರು ಅಪ್ರಾಪ್ತ ಸಹೋದರಿಯರು ಭಾವುಕ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ ನಿಮ್ಮ ಕಣ್ಣು ಮುಂದೆ ಸಾಯೋದಕ್ಕೆ ಆಗಲ್ಲ… ದೂರ ಹೋಗಿ ಸತ್ತಿದ್ದೇವೆ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟಿರುವುದು ಪೋಷಕರು ಮತ್ತು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ನಡೆದಿದ್ದು, ಗ್ರಾಮದ ರಾಮಚಂದ್ರ ಅವರ ಪುತ್ರಿಯರಾದ ಸುಜಾತಾ(16) ಮತ್ತು ರುಕ್ಮಿಣಿ(14) ಮನೆಯಿಂದ ನಾಪತ್ತೆಯಾಗಿರುವ ಅಪ್ರಾಪ್ತ ಸಹೋದರಿಯರಾಗಿದ್ದಾರೆ. ಮನೆಯಲ್ಲಿನ ಯಾವುದೋ ವಿಚಾರಕ್ಕೆ ತಾಯಿ ಮಕ್ಕಳಿಗೆ ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಇಬ್ಬರು ಸಹೋದರಿಯರು ಮನೆಯಿಂದ ಹೊರಟು ಹೋಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಭಾವುಕ ಪತ್ರವೊಂದನ್ನು ಬರೆದಿಟ್ಟು ಹೋಗಿರುವುದು ಪ್ರಕರಣಕ್ಕೆ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಇನ್ನು ಪತ್ರದಲ್ಲಿ, ಅಮ್ಮ-ಅಪ್ಪ ಸಾರಿ… ನಿಮ್ಮ ಕಣ್ಣು ಮುಂದೆ ಸಾಯೋದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ" ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಪತ್ರ ಕಂಡ ಪೋಷಕರು ಬೆಚ್ಚಿಬಿದ್ದಿದ್ದು, ತಕ್ಷಣವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮಕ್ಕಳನ್ನು ಹುಡುಕಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಪೋಷಕರ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಕ್ಕಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಮಕ್ಕಳು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಇನ್ನೊಂದೆಡೆ, ಮಕ್ಕಳು ಏನಾದರೂ ದುಡುಕಿನ ನಿರ್ಧಾರ ಕೈಗೊಂಡಿರಬಹುದೇ ಎಂಬ ಆತಂಕ ಕುಟುಂಬಸ್ಥರನ್ನು ಕಾಡುತ್ತಿದೆ.

ಒಟ್ಟಾರೆ, ಇಬ್ಬರು ಅಪ್ರಾಪ್ತ ಸಹೋದರಿಯರ ನಾಪತ್ತೆ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದು, ಮಕ್ಕಳು ಸುರಕ್ಷಿತವಾಗಿ ಮರಳಿ ಬರಲಿ ಎಂಬ ಪ್ರಾರ್ಥನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV